ಬೆಂಗಳೂರು: ಸರ್ಕಾರಿ ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಖಾಸಗಿ ಶಾಲೆಗಳು ಸ್ವಾತಂತ್ರ್ಯ ದಿನಾಚರಣೆಯಂದು ‘ಕರಾಳ ದಿನ’ ಆಚರಿಸಲು ನಿರ್ಧರಿಸಿರುವುದಕ್ಕೆ ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘದ ಸಮನ್ವಯ ಸಮಿತಿ ಆಕ್ಷೇಪಿಸಿದೆ.
ಶಾಲೆಗಳು ವಿಶೇಷ ದಿನದ ಪಾವಿತ್ರ್ಯತೆಯನ್ನು ಹಾಳು ಮಾಡಬಾರದು ಬದಲಿಗೆ ಪೂರ್ಣ ಶಕ್ತಿಯಿಂದ ಬೆಂಬಲಿಸಬೇಕು ಎಂದು ಪೋಷಕರ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ. ಅನುದಾನರಹಿತ ಶಾಲೆಗಳ ಬೇಡಿಕೆಗಳನ್ನು ಆಲಿಸಿ ಈಡೇರಿಸಲು ಆಡಳಿತ ಮಂಡಳಿ ಜೊತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಭೆ ನಡೆಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಮಕ್ಕಳು ಸ್ವಾತಂತ್ರ್ಯದ ಮಹತ್ವವನ್ನು ಅರಿತು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲರಿಗೂ ಗೌರವ ನೀಡಬೇಕು ಎಂದು ಪೋಷಕರ ಸಮಿತಿ ವಿವರಿಸಿದೆ. ಶಾಲೆಗಳು ಮಕ್ಕಳಿಗೆ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ತಿಳಿವಳಿಕೆ ನೀಡುವತ್ತ ಗಮನಹರಿಸಬೇಕು, ಪ್ರತಿಭಟನೆ ನಡೆಸಲ ಸ್ವಾತಂತ್ರ್ಯ ದಿನಾಚರಣೆ ದಿವಸವನ್ನು ಬಳಸುವುದು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಅವರ ಪ್ರಯತ್ನಕ್ಕೆ ಮಾಡಿದ ದೊಡ್ಡ ಅವಮಾನವಾಗಿದೆ ಎಂದು ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕರ ಸಂಘದ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಎನ್.ಯೋಗಾನಂದ ಹೇಳಿದರು.
ಇದಲ್ಲದೆ, ಸರ್ಕಾರವು ಈ ನಿಟ್ಟಿನಲ್ಲಿ ಶಾಲೆಗಳಿಗೆ ತಕ್ಷಣವೇ ಮಾರ್ಗಸೂಚಿಗಳನ್ನು ಹೊರಡಿಸಬೇಕು ಮತ್ತು ನಿಗದಿತ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಶಾಲೆಗಳ ವಿರುದ್ಧ ದೇಶದ್ರೋಹದ ದೂರುಗಳನ್ನು ದಾಖಲಿಸಬೇಕು ಎಂದು ಪೋಷಕರ ಸಮನ್ವಯ ಸಮಿತಿ ಒತ್ತಾಯಿಸಿದೆ. ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿಯು (ಕೆಪಿಎಂಟಿಸಿಸಿ) ಆಗಸ್ಟ್ 6 ರಂದು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಶಿಕ್ಷಕರು ಕಪ್ಪು ಪಟ್ಟಿಯನ್ನು ಧರಿಸಿ ಆಗಸ್ಟ್ 15 ರಂದು ಕರಾಳ ದಿನ ಆಚರಿಸುವುದಾಗಿ ಘೋಷಿಸಿತು. ಕರ್ನಾಟಕದಲ್ಲಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟ, ಗುಣಮಟ್ಟದ ಶಿಕ್ಷಣ ನೀಡಲು ಸ್ವಾತಂತ್ರ್ಯವಿಲ್ಲ ಎಂದು ಆರೋಪಿಸಿದರು.
Advertisement