ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದ ಹಿನ್ನಲೆಯಲ್ಲಿ ಅದರ ಪರಿಶೀಲನೆಗೆ ಸಿಎಂ ಸಿದ್ದರಾಮಯ್ಯ ಅವರು ಇಂದು ಮಂಗಳವಾರ ಆಗಮಿಸಲಿದ್ದಾರೆ.
ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅವರು ವಿಶೇಷ ವಿಮಾನದ ಮೂಲಕ ಕೊಪ್ಪಳ ತಾಲೂಕಿನ ಗಿಣಿಗೇರಿಗೆ ಬಂದು ಇಳಿಯಲಿದ್ದಾರೆ. ಅಲ್ಲಿ ಲಘು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳ ವಿಮಾನ ಲ್ಯಾಂಡ್ ಆಗಲಿದ್ದು, ನಂತರ ರಸ್ತೆ ಮೂಲಕ ತುಂಗಭದ್ರಾ ಜಲಾಶಯದ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಲಿರುವ ಸಿಎಂ ಸಿದ್ದರಾಮಯ್ಯ 19ನೇ ಗೇಟ್ ಮುರಿದ ಸ್ಥಳಕ್ಕೆ ವಿವಿಧ ಸಚಿವರೊಂದಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಭೇಟಿ ಬಳಿಕ ವಿವಿಧ ನೀರಾವರಿ ತಜ್ಞರು, ಅಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ ನಡೆಸಲಿದ್ದಾರೆ.
ಬಾಗಿನ ಅರ್ಪಿಸಲು ಬರಬೇಕಿದ್ದ ಸಿಎಂ ಮುರಿದ ಗೇಟ್ ವೀಕ್ಷಣೆಗೆ ಆಗಮನ: ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಈ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದು, ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಮೊನ್ನೆ ಆಗಸ್ಟ್ 6ರಂದು ಸಿಎಂ ಸಿದ್ದರಾಮಯ್ಯ ಅವರು ಜಲಾಶಯಕ್ಕೆ ಬಾಗಿನ ಅರ್ಪಿಸಲು ಬರಬೇಕಿತ್ತು.
ಬಳಿಕ ಬಾಗಿನದ ದಿನಾಂಕವನ್ನು ಆಗಸ್ಟ್ 10ಕ್ಕೆ ಮುಂದೂಡಲಾಯಿತು. ಬಳಿಕ ಇದೇ ದಿನಾಂಕವನ್ನು ಆಗಸ್ಟ್ 13ಕ್ಕೆ ಮುಂದೂಡಿಕೆ ಮಾಡಲಾಯಿತು. ಅಂದುಕೊಂಡಂತೆ ನಡೆದಿದ್ದರೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಂಗಾಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಬೇಕಿತ್ತು.
ಆದರೆ ಆಗಸ್ಟ್ 10ರಂದು ರಾತ್ರಿ ಟಿಬಿ ಡ್ಯಾಂನ 19ನೇ ಕ್ರಸ್ಟ್ ಗೇಟ್‌ನ ಚೈನ್ ತುಂಡಾಗಿ ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗುತ್ತಿದೆ. ಈ ಘಟನೆಯ ಹಿನ್ನಲೆಯಲ್ಲಿ ಬಾಗಿನ ಅರ್ಪಣೆ ಮಾಡಲು ಬರಬೇಕಿದ್ದ ಸಿಎಂ ಮುರಿದ ಗೇಟ್ ವೀಕ್ಷಿಸಿ ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ಮಾಡಲು ಆಗಮಿಸುವ ಪರಿಸ್ಥಿತಿ ಎದುರಾಗಿದೆ.
ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯವಾಗಿದೆ.
Advertisement