ಬೆಂಗಳೂರು: ಭಾನುವಾರ ಬೆಳಗ್ಗೆ ಟಿಬಿ ಅಣೆಕಟ್ಟಿನಲ್ಲಿ ಕ್ರೆಸ್ಟ್ ಗೇಟ್ ಮುರಿದು ಹೋಗಿರುವುದಕ್ಕೆ ಅನನುಭವಿ ಅಧಿಕಾರಿಗಳು ಮತ್ತು ವಿಳಂಬ ಧೋರಣೆ ನಿರ್ಧಾರಗಳು ಸೇರಿದಂತೆ ಹಲವಾರು ಅಂಶಗಳು ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೆಲವು ಎಂಜಿನಿಯರ್‌ಗಳು ಸರಿಯಾದ ಅರ್ಹತೆ ಅಥವಾ ಅನುಭವವಿಲ್ಲದೆ ನಿರ್ಣಾಯಕ ಹುದ್ದೆಗಳಿಗೆ ನೇಮಿಸಲ್ಪಟ್ಟಿದ್ದಾರೆ. ಇವರು ರಾಜಕೀಯ ಪ್ರಭಾವ ಅಥವಾ ಇತರ ಶಿಫಾರಸ್ಸಿನ ಮೇಲೆ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಿರುತ್ತಾರೆ ಎಂದು ಹೆಸರು ಹೇಳಲು ಬಯಸದ ತಜ್ಞರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಧಿಕಾರಿಗಳಿಗೆ ಅನುಭವದ ಕೊರತೆಯಿಂದಾಗಿ ಅಣೆಕಟ್ಟು ನಿರ್ವಹಣೆಯಲ್ಲಿ ಗಮನಾರ್ಹವಾದ ಮೇಲ್ವಿಚಾರಣೆ ನಡೆಸಲು ಸಾಧ್ಯವಾಗುವುದಿಲ್ಲ. ಅಂತಿಮವಾಗಿ ಗೇಟ್ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. ಭಾರೀ ಮಳೆಗೆ ಅಣೆಕಟ್ಟಿನ ಸದೃಢತೆಯನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ನಿರ್ದಿಷ್ಟವಾಗಿ ಕರೆಯಲಾಗುವ ಮಾನ್ಸೂನ್ ಪೂರ್ವ ಸಭೆಗಳಲ್ಲಿ ಸಮಸ್ಯೆಯನ್ನು ಗುರುತಿಸಬೇಕು ಮತ್ತು ಪರಿಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ವಿಪತ್ತನ್ನು ತಡೆಯಬಹುದಾದ ನಿರ್ಣಾಯಕ ಘಟಕವಾದ ತಡೆಗೋಡೆಯಂತಹ ಅಗತ್ಯ ಸಾಧನಗಳಿಗೆ ಹಣವನ್ನು ಮಂಜೂರು ಮಾಡುವುದಕ್ಕೆ ಹಿರಿಯ ಅಧಿಕಾರಿಯೊಬ್ಬರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.
ಈ ಗೇಟ್ ಅಳವಡಿಸುವ ನಿರ್ಧಾರವು 18 ವರ್ಷಗಳಿಂದ ಬಾಕಿ ಉಳಿದಿದೆ. ಪ್ರತಿ ಬಾರಿ ವಿಷಯ ಪ್ರಸ್ತಾಪಿಸಿದಾಗಲೂ ಚರ್ಚೆ ನಂತರ ಮುಂದೂಡಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಟಿಬಿ ಡ್ಯಾಂನಲ್ಲಿ ಇಂತಹ ಘಟನೆ ಸಂಭವಿಸಿರುವುದು ಇದೇ ಮೊದಲಲ್ಲ. ಐದು ವರ್ಷಗಳ ಹಿಂದೆ, ಒಂದು ಗೇಟ್ ಜಾಮ್ ಆಗಿತ್ತು ಆಗ ಅದನ್ನು ಸರಿ ಪಡಿಸಲು ಸಾಧ್ಯವಾಗಿರಲಿಲ್ಲ. ಆ ವೇಳೆ ಅಧಿಕಾರಿಗಳು ನೀರಿನ ಹರಿವನ್ನು ನಿಯಂತ್ರಿಸಲು ಮರಳು ತುಂಬಿದ ಸೆಣಬಿನ ಚೀಲಗಳನ್ನು ಬಳಸಿದರು. ಕೆಲವು ವರ್ಷಗಳ ಹಿಂದೆ ನಾರಾಯಣಪುರ ಅಣೆಕಟ್ಟಿನಲ್ಲಿ ಗೇಟ್ ಒಡೆದುಹೋದಾಗ ಇದೇ ರೀತಿ ಮಾಡಲಾಯಿತು ಎಂದು ಹೇಳಿದ್ದಾರೆ..
ಅಣೆಕಟ್ಟಿನ ಅಧಿಕಾರಿಗಳ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿರುವುದು ಸಮಸ್ಯೆ ಮರುಕಳಿಸು ಮೂಲ ಕಾರಣವಾಗಿದೆ. 1983-88ರಿಂದಲೂ ಶಾಸಕರ ಶಿಫಾರಸಿನ ಮೇರೆಗೆ ಅಧಿಕಾರಿಗಳನ್ನು ನಿಯೋಜಿಸುವುದು ರೂಢಿಯಲ್ಲಿದೆ. ಎಲ್ಲಿಯವರೆಗೆ ಶಾಸಕರು ಮಧ್ಯಪ್ರವೇಶಿಸಿ ತಮಗೆ ಬೇಕಾದ ಅಧಿಕಾರಿಗಳನ್ನು ಉನ್ನತ ಹುದ್ದೆಗೆ ಪೋಸ್ಟಿಂಗ್ ಮಾಡಿಸುತ್ತಿರುತ್ತಾರೋ ಅಲ್ಲಿಯವರೆಗೆ ಇಂತಹ ಎಡವಟ್ಟುಗಳು ಸಂಭವಿಸುತ್ತಿರುತ್ತವೆ ಎಂದು ಮೂಲಗಳು ತಿಳಿಸಿವೆ.
Advertisement