ರಾಜ್ಯ ಸರ್ಕಾರಕ್ಕೆ HMT ಭೂಮಿ ವಾಪಸ್ ನೀಡುವ ಪ್ರಶ್ನೆಯೇ ಇಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ

ಬೆಂಗಳೂರಿನ ಹೆಮ್ಮೆಯಾಗಿರುವ ಎಚ್ ಎಂಟಿಯನ್ನು ಪುನರುಜ್ಜೀವನಗೊಳಿಸಲು ಅರಣ್ಯ ಸಚಿವರು ತಮ್ಮ ಸಣ್ಣತನವನ್ನು ಬಿಟ್ಟು ಸಹಕಾರ ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಕುಮಾರಸ್ವಾಮಿ
ಕುಮಾರಸ್ವಾಮಿ
Updated on

ಬೆಂಗಳೂರು: ಹಿಂದೂಸ್ತಾನ್ ಮೆಷಿನ್ ಟೂಲ್ಸ್‌ನಿಂದ 281 ಎಕರೆ ಭೂಮಿ ವಶಪಡಿಸಿಕೊಳ್ಳಲು ರಾಜ್ಯ ಅರಣ್ಯ ಇಲಾಖೆಗೆ 'ಸ್ಪಷ್ಟ ಸೂಚನೆ' ನೀಡಿರುವ ಆಡಳಿತಾತ್ಮಕ ಟಿಪ್ಪಣಿಗೆ ಸಂಬಂಧಿಸಿದಂತೆ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಮಂಗಳವಾರ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇಂದು ಬೆಂಗಳೂರಿನ ಎಚ್​ಎಂಟಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, HMT ಭೂಮಿ ವಾಪಸ್ ನೀಡುವ ಪ್ರಶ್ನಿಯೇ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಒಂದು ಕಾಲದಲ್ಲಿ ಶೇ. 90 ರಷ್ಟು ಮಾರುಕಟ್ಟೆ ಷೇರು ಹೊಂದಿದ್ದ ಮತ್ತು ಗಡಿಯಾರ ಮಾರುಕಟ್ಟೆಯನ್ನು ಆಳುತ್ತಿದ್ದ ಎಚ್ ಎಂಟಿ ಈಗ ಮುಚ್ಚುವ ಹಂತಕ್ಕೆ ಬಂದಿದೆ. ಬೆಂಗಳೂರಿನ ಹೆಮ್ಮೆಯಾಗಿರುವ ಎಚ್ ಎಂಟಿಯನ್ನು ಪುನರುಜ್ಜೀವನಗೊಳಿಸಲು ಅರಣ್ಯ ಸಚಿವರು ತಮ್ಮ ಸಣ್ಣತನವನ್ನು ಬಿಟ್ಟು ಸಹಕಾರ ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಒಂದು ಕಾಲದಲ್ಲಿ ಶೇಕಡ 90ರಷ್ಟು ಮಾರುಕಟ್ಟೆಯನ್ನು ವಶಪಡಿಸಿಕೊಂಡಿದ್ದ ಈ ಪಿಎಸ್‌ಯುನ ದಯನೀಯ ಸ್ಥಿತಿ ನಿಮ್ಮ ಕಣ್ಣಲ್ಲಿ ನೀರು ತರಿಸುವುದಿಲ್ಲವೇ? ನಿಮಗೆ ಕರ್ನಾಟಕದ ಬಗ್ಗೆ ಅಭಿಮಾನವಿಲ್ಲವೇ? ಇಂತಹ ಕಂಪನಿಯನ್ನು ಮುಚ್ಚಲು ನಾವು ಅಧಿಕಾರಕ್ಕೆ ಬರಬೇಕೇ? ಖಂಡ್ರೆ, ಈ ಸಣ್ಣತನವನ್ನು ಬಿಟ್ಟುಬಿಡಿ ಎಂದು ವಾಗ್ದಾಳಿ ನಡೆಸಿದರು.

ಖಂಡ್ರೆ ಅವರ ಆಗಸ್ಟ್ 9ರ ಆಡಳಿತಾತ್ಮಕ ಟಿಪ್ಪಣಿಯನ್ನು ಉಲ್ಲೇಖಿಸಿದ ಕೇಂದ್ರ ಸಚಿವರು, ಜೂನ್ 11, 1896 ರ ಗೆಜೆಟ್ ಅಧಿಸೂಚನೆಯನ್ನು ಉಲ್ಲೇಖಿಸಿ ಬೆಂಗಳೂರು ನಗರದ ಪೀಣ್ಯ-ಜಾಲಹಳ್ಳಿಯ ಸರ್ವೆ ನಂಬರ್ 1 ರಲ್ಲಿ 599 ಎಕರೆ ಅರಣ್ಯ ಭೂಮಿ ಎಂದು ತೋರಿಸಿದರು. ಈ ಭೂಮಿಯನ್ನು ಎಚ್‌ಎಂಟಿಗೆ ಉಡುಗೊರೆಯಾಗಿ ನೀಡಲಾಗಿದೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಅವರು ಹೇಳಿದರು.

ಈ ಎಚ್​ಎಂಟಿಗೆ ಲ್ಯಾಂಡ್ ಯಾವ ರೀತಿ ಬಂತು? 1964ರಲ್ಲಿ ಎಚ್​ಎಂಟಿಯಿಂದ ಕಾರ್ಖಾನೆ ಆಗಬೇಕು ಅಂತ ಭೂಮಿ ನೀಡಲಾಗಿದೆ. ಅವತ್ತು ನೆಹರು ಅವರು ಬಂದು ಕಾರ್ಖಾನೆಗೆ ಭೇಟಿ ನೀಡಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ, ಮೈಸೂರು ಅರಸು ಎಲ್ಲರೂ ಭೇಟಿ ನೀಡಿದ್ದಾರೆ. ಇದಕ್ಕೆ ಇತಿಹಾಸ ಇದೆ. ನೆಹರು ಅವರ ಕಾಲದಲ್ಲಿ ಎಚ್​ಎಂಟಿ‌ ಆರಂಭ ಆಯ್ತು. ನೆಹರು ಕಾಲದಲ್ಲಿ ವಾಚ್ ಮತ್ತು ಬೆಲ್ಟ್ ತಯಾರು ಮಾಡಲು ಕಾರ್ಖಾನೆ ಆರಂಭವಾಗಿದ್ದು. ಪ್ರತಿ ವರ್ಷ ಹೊಸ ಯೂನಿಟ್ ಆರಂಭ ಮಾಡುತ್ತಿದ್ದರು. ಎಚ್​ಎಂಟಿಯಲ್ಲಿ 1970 ರಲ್ಲಿ 270 ಕೋಟಿ ವಾರ್ಷಿಕ ಆದಾಯ ಇತ್ತು. ಬಂದ ಲಾಭದಿಂದ ದೇಶದ ಹಲವು ಕಡೆ ಕಂಪನಿ ಸ್ಥಾಪನೆ ಮಾಡಲಾಯ್ತು. ಹೈದರಾಬಾದ್, ಜಾರ್ಖಾಂಡ್ ಕಾರ್ಖಾನೆಗಳು ನಡೆಯುತ್ತಿದ್ದವು. ನಿನ್ನೆ ಸಚಿವರು ಟಿಪ್ಪಣಿ ಬರೆದಿದ್ದು ಯಾವ ಕಾರಣಕ್ಕೆ? ಸಚಿವರು ಸೂಚನೆ ಕೊಟ್ಟ ಕೂಡಲೇ ಎಚ್​ಎಂಟಿ ಜಾಗ ವಶ ಪಡಿಸಿಕೊಳ್ಳಲು ಆಗುತ್ತಾ? 2020 ಡಿನೋಟಿಪೈ ಮಾಡಿದ್ದು ಯಾರು? ನಾನು ಎಚ್​ಎಂಟಿ ಕಾರ್ಖಾನೆಗೆ ಭೇಟಿ ಕೊಟ್ಟು ಅದನ್ನು ಉಳಿಸಬೇಕು ಎಂದು ಕೆಲ ನಿರ್ಧಾರ ತೆಗೆದುಕೊಂಡು ನನ್ನ ರೀತಿಯಲ್ಲಿ ನಾನು ಶ್ರಮ ಹಾಕುತ್ತಿದ್ದೇನೆ. ರಾಜ್ಯ ಸರ್ಕಾರಕ್ಕೆ HMT ಭೂಮಿ ವಾಪಸ್ ನೀಡುವ ಪ್ರಶ್ನಿಯೇ ಇಲ್ಲ ಎಂದರು.

ಕುಮಾರಸ್ವಾಮಿ
HMT ಭೂಮಿ ವಶಕ್ಕೆ ಪಡೆಯಲು ಅರಣ್ಯ ಇಲಾಖೆ ಪತ್ರ, ಕುಮಾರಸ್ವಾಮಿ ಕೆಂಡಮಂಡಲ!

ಕುಮಾರಸ್ವಾಮಿ ಎಚ್‌ಎಂಟಿ ಕಾರ್ಖಾನೆಗೆ ಭೇಟಿ ಕೊಟ್ಟ ಅನ್ನೋ ಕಾರಣಕ್ಕೆ ಈ ರೀತಿ ಅಡ್ಡಗಾಲು ಹಾಕಲಾಗಿದೆ. ವಿಶ್ವೇಶ್ವರಯ್ಯ ಕನಸಿನ ಕಾರ್ಖಾನೆ ಉಳಿಸಬೇಕೆಂದು ನಾನು ಶ್ರಮ ಹಾಕುತ್ತಿದ್ದೇನೆ. ಎಚ್‌ಎಂಟಿಗೆ 599 ಎಕರೆ ಜಮೀನನ್ನ ಸರ್ಕಾರ ಪುಕ್ಕಟೆ ಕೊಟ್ಟಿಲ್ಲ. ನಾನು ಕರೆ ಮಾಡಿದ ತಕ್ಷಣ ಅಧಿಕಾರಿಗಳು ಎಲ್ಲಾ ದಾಖಲೆಗಳನ್ನ ತೆಗೆದಿಟ್ಟಿದ್ದಾರೆ. 1963 ಡಿಸೆಂಬರ್ 4 ರಂದು 4.40 ಲಕ್ಷ ಹಣ ಕಟ್ಟಲಾಗಿದೆ. ಮಂಜೂರಾದ ಜಮೀನಿಗೆ ದುಡ್ಡು ಕಟ್ಟಿದ್ದಾರೆ, ಪುಕ್ಕಟೆ ತೆಗೆದುಕೊಂಡಿಲ್ಲ. ನಾನು ಜಸ್ಟ್ ಎಂಟ್ರಿಯಾಗಿದ್ದಕ್ಕೆ 45 ರೂ ಇದ್ದ ಶೇರ್ ವ್ಯಾಲ್ಯೂ 92ಕ್ಕೆ ಏರಿಕೆ ಮಾಡಲಾಗಿದೆ. ಯಾರಿಗೆ ಕೊಡಲಿಕ್ಕೆ ತರಾತುರಿ ಆದೇಶ ಮಾಡಿದ್ದೀರಿ ಈಶ್ವರ್ ಖಂಡ್ರೆ? ಖಾಲಿ ಜಾಗ ತಕ್ಷಣ ವಶಪಡಿಸಿಕೊಳ್ಳಿ ಎಂದು ಅಧಿಕಾರಿಗಳಿ ಹೇಳಿದ್ದಾರೆ ಎಂದು ಖಂಡ್ರೆ ವಿರುದ್ಧ ಗುಡುಗಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com