ಮುಡಾ ಹಗರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮತ್ತೊಂದು ದೂರು ಸಲ್ಲಿಸಲಾಗಿದೆ. ರಾಜ್ಯಪಾಲರ ಹೆಸರಿನಲ್ಲಿ ಅಕ್ರಮ ಪರಿತ್ಯಾಜನ ಪತ್ರ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದ್ದು, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ದೂರನ್ನು ರಾಜ್ಯಪಾಲರ ಕಚೇರಿ ಸ್ವೀಕರಿಸಿದೆ. ಮೈಸೂರು ನಗರಾಭಿವೃದ್ಧಿ ಇಲಾಖೆ ಪ್ರಥಮ ದರ್ಜೆ ಸಹಾಯಕ ಕೆ. ಸಿ. ಉಮೇಶ್ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಂದ ಪರಿತ್ಯಾಜನ ಪತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ. 2021 ರ ನವೆಂಬರ್ 25 ರಂದು ಅಕ್ರಮವಾಗಿ ನಿಮ್ಮ ಹೆಸರಿನಲ್ಲಿ ಪರಿತ್ಯಾಜನ ಪತ್ರ ನೋಂದಣಿಯಾಗಿದೆ. ಪಾರ್ವತಿಯವರು ನಿಮ್ಮ ಹೆಸರಿನಲ್ಲಿ ಪರಿತ್ಯಾಜನ ಪತ್ರ ಮಾಡಿಕೊಟ್ಟಿದ್ದಾರೆ. ಕೂಡಲೇ ಉಮೇಶ್ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ. ರಾಜ್ಯಪಾಲರ ಮುಂದಿನ ನಡೆ ಏನೆಂಬ ಬಗ್ಗೆ ಕುತೂಹಲ ಮೂಡಿದೆ. ಸ್ನೇಹಮಹಿ ಕೃಷ್ಣ ಈಗಾಗಲೇ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಖಾಸಗಿ ದೂರು ಸಲ್ಲಿಸಿದ್ದು ಸಾಲು ಸಾಲು ಆರೋಪ ಮಾಡಿದ್ದಾರೆ.
ತುಂಗಭದ್ರಾ ಡ್ಯಾಂ ಗೇಟ್ ಮುರಿದಿರುವ ಹಿನ್ನೆಲೆಯಲ್ಲಿ ಜಲಾಶಯವಿರುವ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಭೇಟಿ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ, ಜಲಾಶಯದ ನಿರ್ವಹಣೆಯ ಜವಾಬ್ದಾರಿ ತುಂಗಭದ್ರಾ ಮಂಡಳಿಗೆ ಸೇರಿರುತ್ತದೆ. ಆದರೆ, ಈ ವಿಷಯದಲ್ಲಿ ನಾನು ಯಾರನ್ನೂ ದೂಷಿಸುವುದಿಲ್ಲ. ಈ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಹವಾಮಾನ ಮುನ್ಸೂಚನೆ ತಿಳಿಸುವಂತೆ ತುಂಗಭದ್ರಾ ಜಲಾಶಯದಿಂದ ಪೋಲಾಗಿರುವ ನೀರು ಮತ್ತೆ ತುಂಬಿಕೊಳ್ಳಲಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಾಳೆ ಹೊಸ ಗೇಟ್ ತಯಾರಾಗಲಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
HMT ಭೂಮಿ ವಶಕ್ಕೆ ಪಡೆಯುವ ಕರ್ನಾಟಕ ಅರಣ್ಯ ಇಲಾಖೆ ಪತ್ರದ ವಿರುದ್ಧ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಕೆಂಡಮಂಡಲರಾಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವರು, HMT ಕಂಪನಿಂದ 281 ಎಕರೆ ವಿಸ್ತೀರ್ಣದ ಭೂಮಿಯನ್ನು ಕೂಡಲೇ ವಶಕ್ಕೆ ಪಡೆಯುವ ಬಗ್ಗೆ ಕರ್ನಾಟಕ ಅರಣ್ಯ ಇಲಾಖೆ, ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮೊನ್ನೆ ಪತ್ರ ಬರೆದಿದೆ. ಯಾವ ಆಧಾರದ ಮೇಲೆ ಈ ಪತ್ರ ಬರೆಯಲಾಯಿತು ಎಂದು ಅರಣ್ಯ ಸಚಿವರನ್ನು ಪ್ರಶ್ನಿಸಿದ್ದಾರೆ. ಅರಣ್ಯ ಭೂಮಿ ಹಾಗೂ ಎಚ್ ಎಂಟಿ ಕಂಪನಿ ಜಮೀನುಗಳ ಕುರಿತು ಮಾಹಿತಿ ಇಲ್ಲದೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡುತ್ತಿದ್ದಾರೆ. ಎಚ್ ಎಂಟಿ ಕಂಪನಿಯ ಜಮೀನನ್ನು ಒತ್ತುವರಿ ನೆಪದಲ್ಲಿ ರಾಜ್ಯ ಸರ್ಕಾರ ವಶಕ್ಕೆ ಪಡೆಯುವ ದುಸ್ಸಾಹಸ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಅರಣ್ಯ ಸಚಿವರ ಹೇಳಿಕೆಯನ್ನು ತಳ್ಳಿಹಾಕಿದ ಕುಮಾರಸ್ವಾಮಿ, ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ಮಾಜಿ ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾಗಾಂಧಿ ಅವರು ಭೇಟಿ ನೀಡಿದ ಎಚ್‌ಎಂಟಿ ಸ್ಥಾವರವನ್ನು 958-59 ಮತ್ತು 1968-70 ರಲ್ಲಿ ಭೂಮಿ ಸ್ವಾಧೀನಪಡಿಸಿಕೊಂಡು ಸ್ಥಾಪಿಸಲಾಯಿತು ಎಂದರು.
ವೋಲ್ವೊ ಬಸ್‌ನ ಚಾಲಕ ನಿಯಂತ್ರಣ ತಪ್ಪಿ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬನಿಗೆ ಗಂಭೀರ ಗಾಯಗಳಾಗಿದ್ದು, ದ್ವಿಚಕ್ರ ವಾಹನ ಸೇರಿದಂತೆ ಆರು ವಾಹನಗಳು ಜಖಂಗೊಂಡಿರುವ ಘಟನೆ ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆಯಲ್ಲಿ ಇಂದು ನಡೆದಿದೆ. ಅದೃಷ್ಟವಶಾತ್ ದುರ್ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ವೋಲ್ವೋ ಬಸ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಚ್‌ಎಸ್‌ಆರ್ ಲೇಔಟ್ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಅಪಘಾತದ 2.20 ನಿಮಿಷಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಾಲಕ ಫ್ಲೈಓವರ್‌ನಲ್ಲಿ ಪೀಕ್ ಅವರ್ ಟ್ರಾಫಿಕ್‌ನಲ್ಲಿ ನಿಧಾನವಾಗಿ ಚಾಲನೆ ಮಾಡುತ್ತಿದ್ದರು.
ಬಸವ ತತ್ವದ ‘ಆಲದ ಮರ’ ಎಂದೇ ಖ್ಯಾತರಾಗಿದ್ದ ಶತಾಯುಷಿ ಶರಣ ವಿ ಸಿದ್ದರಾಮಣ್ಣ ಇಂದು ದಾವಣಗೆರೆಯಲ್ಲಿ ನಿಧನರಾದರು. ಅವರಿಗೆ 104 ವರ್ಷ ವಯಸ್ಸಾಗಿತ್ತು. ವಚನಗಳನ್ನು ಸ್ಮೃತಿಯಿಂದ ಪಠಿಸುವ ಸಾಮರ್ಥ್ಯ ಮತ್ತು ಲಿಂಗಾಯತ ಮತ್ತು ಬಸವ ತತ್ತ್ವದ ಬೋಧನೆಗಳನ್ನು ಮೌಖಿಕವಾಗಿ ಹಂಚಿಕೊಳ್ಳುವ ಶತಮಾನಗಳ ಹಳೆಯ ಸಂಪ್ರದಾಯವನ್ನು ಉಳಿಸಿಕೊಂಡು ಸಿದ್ದರಾಮಣ್ಣ ಪ್ರಸಿದ್ಧರಾಗಿದ್ದರು.
Advertisement