BSY ಗೆ ಮತ್ತೆ ಭೂ ಸಂಕಷ್ಟ?; ಗ್ಯಾರೆಂಟಿ ಯೋಜನೆ ನಿಲ್ಲಿಸಲ್ಲ- ಸಿದ್ದರಾಮಯ್ಯ; SBI, PNB ಬ್ಯಾಂಕ್ ನಲ್ಲಿರುವ ಠೇವಣಿ ವಾಪಸ್ ಪಡೆಯಲು ಸರ್ಕಾರ ನಿರ್ಧಾರ; ಯಾರಾದರೂ ರಸ್ತೆ ದುರಸ್ತಿ ಮಾಡಿಸ್ರಪ್ಪಾ- ಸಚಿವ ಕೃಷ್ಣ ಭೈರೇಗೌಡ- ಇವು ಈ ದಿನದ ಪ್ರಮುಖ ಸುದ್ದಿಗಳು 15-08-2024

file pic
(ಸಂಗ್ರಹ ಚಿತ್ರ)online desk

1. ಗ್ಯಾರೆಂಟಿ ಯೋಜನೆ ಮುಂದುವರೆಯಲಿದೆ- ಸಿದ್ದರಾಮಯ್ಯ

ರಾಜ್ಯದಲ್ಲಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದು, ಈ ಮೂಲಕ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ, ಚರ್ಚೆ, ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ, ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನಾಡಿನ ಸಮಸ್ತ ಜನರ ಬದುಕಿಗೆ ಆರ್ಥಿಕ ಭದ್ರತೆ ತರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಈ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದು ತಿಳಿಸಿದರು.

ಭಾರಿ ಮಳೆಯಿಂದ ಮನೆ ಕಳೆದುಕೊಂಡವರಿಗೆ 1.2 ಲಕ್ಷ ರೂ. ಪರಿಹಾರದೊಂದಿಗೆ ಮನೆ ಹಂಚಿಕೆ ಮಾಡಲು ಕ್ರಮ ವಹಿಸಲಾಗಿದೆ. ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಸಾಧಿಸುವುದು ಅತ್ಯಗತ್ಯ ಎಂಬ ಪ್ರಕೃತಿಯ ಎಚ್ಚರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಪಶ್ಚಿಮ ಘಟ್ಟದಲ್ಲಿ ಭೂಕುಸಿತ ತಡೆಗೆ 100 ಕೋಟಿ ರೂ ಮೀಸಲಿಡಲಾಗುವುದು ಎಂದು ಹೇಳಿದ್ದಾರೆ.

2. ರಸ್ತೆ ಗುಂಡಿ ಬಗ್ಗೆ ಸಚಿವರ ಟ್ವೀಟ್, ಇದು ದರಿದ್ರ ಸರ್ಕಾರ ಎಂಬುದು ಸ್ಪಷ್ಟ ಆರ್ ಅಶೋಕ್ ಟೀಕೆ

ರಸ್ತೆ ಗುಂಡಿ ಮುಚ್ಚಿಸುವುದರ ಬಗ್ಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಮಾಡಿದ ಟ್ವೀಟ್ ವಿಪಕ್ಷ ನಾಯಕರ ಟೀಕೆಗೆ ಗ್ರಾಸವಾಗಿದೆ. ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯ ವಿಡಿಯೋವನ್ನು ಸಾರ್ವಜನಿಕರು ನನಗೆ ಕಳಿಸಿದ್ದಾರೆ. ಬಿಬಿಎಂಪಿ ಆಯುಕ್ತರು ಅಥವಾ ಬಿಎಂಆರ್​​ ಸಿಎಲ್ ಎಂಡಿ ಯಾರಾದರೂ ಆಗಲಿ ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಿ ಎಂದು ಕೃಷ್ಣಭೈರೇಗೌಡ ಟ್ವೀಟ್​​​ನಲ್ಲಿ ಹೇಳಿದ್ದರು. ಕಂದಾಯ ಸಚಿವರು ಮತ್ತು ಬ್ಯಾಟರಾಯನಪುರ ಶಾಸಕರಾದ ಕೃಷ್ಣ ಭೈರೇಗೌಡರು ಅತ್ಯಂತ ಅಸಹಾಯಕರಾಗಿ ಟ್ವೀಟ್ ಮಾಡಿದ್ದಾರೆ. ಸಚಿವರು ಬೇಡಿಕೊಳ್ಳುತ್ತಿರುವುದನ್ನು ನೋಡಿದರೆ ಈ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂತಹ ದರಿದ್ರ ನಾಲಾಯಕ್ ಸರ್ಕಾರ ಎಂಬುದು ಸ್ಪಷ್ಟವಾಗುತ್ತದೆ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರು ತಮ್ಮ ಕೆಲಸ ಮಾಡುತ್ತಿಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೊಡುತ್ತಿದ್ದೀರೋ? ಅಥವಾ ಇದು ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಬಹಿರಂಗ ಬಂಡಾಯದ ಮುನ್ಸೂಚನೆಯೋ? ಎಂದು ಪ್ರಶ್ನಿಸಿದ್ದಾರೆ.

3. ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ರಾಜ್ಯಪಾಲರ ಮೊರೆ 

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸಾಮಾಜಿಕ‌ ಕಾರ್ಯಕರ್ತರ ನಿಯೋಗ ರಾಜ್ಯಪಾಲರ ಮೊರೆ ಹೋಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದಿನ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯ ಶಿಫಾರಸುಗಳನ್ನು ನಿರ್ಲಕ್ಷಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 116.16 ಎಕರೆ ಸರ್ಕಾರಿ ಭೂಮಿಯನ್ನು ಶೈಕ್ಷಣಿಕ ಸೊಸೈಟಿಗೆ ಮಂಜೂರು ಮಾಡಿದ್ದಾರೆ. ಈ ಬಗ್ಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರನ್ನು ಭೇಟಿಯಾಗಿ ಟಿ. ನರಸಿಂಹಮೂರ್ತಿ ಎಂಬವರು ಮನವಿ ಮಾಡಿದ್ದಾರೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಕೈಗಾರಿಕಾ ಉದ್ದೇಶಕ್ಕಾಗಿ ರೈತರಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯ 187 ಕೋಟಿ ಬೆಲೆ ನಿಗದಿಪಡಿಸಿತ್ತು. ಆದರೂ, ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರಕ್ಕೆ (CESS) 50 ಕೋಟಿ ರೂ.ಗೆ ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

4. ಪಿಎಸ್‌ಐ ಪರಶುರಾಮ್ ಸಾವು ಸಿಬಿಐಗೆ ವಹಿಸಲು ಆಗ್ರಹ 

ಯಾದಗಿರಿ ನಗರ ಠಾಣೆಯ ಮೃತ ಪಿಎಸ್‌ಐ ಪರಶುರಾಮ್ ಅನುಮಾನಾಸ್ಪದ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ನಟ ಚೇತನ್ ಅಹಿಂಸಾ ಆಗ್ರಹಿಸಿದ್ದಾರೆ. ಪರಶುರಾಮ್ ಅವರ ಸಹೋದರ ಹನುಮಂತ್ ಅವರ ನೇತೃತ್ವದಲ್ಲಿ ಯಾದಗಿರಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ನಟ ಚೇತನ್ ಅಹಿಂಸಾ, ಯಾದಗಿರಿ ಶಾಸಕ ಕಾಂಗ್ರೆಸ್ ಪಕ್ಷದವರಾಗಿರುವುದರಿಂದ ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕುವ ಸಾಧ್ಯತೆಗಳಿವೆ. ಹೀಗಾಗಿ ನಾವು ಸಿಐಡಿ ತನಿಖೆಯನ್ನು ನಂಬುವುದಿಲ್ಲ. ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.

5. ಎಸ್ ಬಿಐ, ಪಿಎನ್ ಬಿ ಬ್ಯಾಂಕ್ ನಲ್ಲಿರುವ ಠೇವಣಿ ವಾಪಸ್ ಪಡೆಯಲು ಸರ್ಕಾರದ ನಿರ್ಧಾರ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿನ ತನ್ನ ಎಲ್ಲಾ ಠೇವಣಿ ಮತ್ತು ಹೂಡಿಕೆಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ತನ್ನ ಎಲ್ಲಾ ಇಲಾಖೆಗಳು, ಮಂಡಳಿಗಳು, ನಿಗಮಗಳು, ಸಾರ್ವಜನಿಕ ವಲಯದ ಘಟಕಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಈ ಬ್ಯಾಂಕ್ ಗಳೊಂದಿಗೆ ಇರುವ ಯಾವುದೇ ವ್ಯವಹಾರವನ್ನು ನಿಲ್ಲಿಸುವಂತೆ ನಿಲ್ಲಿಸುವಂತೆ ಆದೇಶಿಸಿದೆ. ಹಲವು ಪ್ರಕರಣಗಳಲ್ಲಿ ನಿಶ್ಚಿತ ಠೇವಣಿಗಳು ಮರುಪಾವತಿ ಆಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com