
ಬೆಂಗಳೂರು: ನಾಡಿನ ಜನತೆ ಇಂದು ಶುಕ್ರವಾರ ವರ ಮಹಾಲಕ್ಷ್ಮಿ ವ್ರತದ ಆಚರಣೆಯಲ್ಲಿ ತೊಡಗಿದ್ದಾರೆ. ಮನೆಗಳಲ್ಲಿ ಹೆಂಗಳೆಯರು, ಮಕ್ಕಳು ಮುಂಜಾನೆಯೇ ಎದ್ದು ಮನೆಯ ಮುಂದೆ ಸಾರಿಸಿ ರಂಗೋಲಿ ಬಳಿದು, ತಳಿರು ತೋರಣ ಕಟ್ಟಿ ಲಕ್ಷ್ಮೀ ದೇವಿಯ ಸ್ತ್ರೋತ್ರ, ವ್ರತ ಆಚರಣೆಗೆ ಅಣಿಯಾಗುತ್ತಿದ್ದಾರೆ.
ಹಲವು ಕಡೆಗಳಲ್ಲಿ ಈಗಾಗಲೇ ಪೂಜೆ ಮುಗಿದು ಹಬ್ಬದ ಅಡುಗೆಯಲ್ಲಿ ತೊಡಗಿದ್ದಾರೆ. ಸಾಯಂಕಾಲ ಮುತ್ತೈದೆಯರನ್ನು ಕರೆದು ಅರಶಿನ-ಕುಂಕುಮ ಬಾಗಿನ ನೀಡಲು ಅಣಿ ಮಾಡಿಕೊಳ್ಳುತ್ತಿದ್ದಾರೆ.
ಶ್ರಾವಣ ಮಾಸದ ಪೂರ್ಣಿಮೆಯ ಹಿಂದಿನ ಶುಕ್ರವಾರದಂದು ವರಲಕ್ಷ್ಮಿ ವ್ರತ ಆಚರಿಸಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಓಲೈಸಲು ಭಕ್ತರು ಈ ಆಚರಣೆ ಮಾಡುತ್ತಾರೆ. ವರ ಎಂದರೆ "ವರ" ಮತ್ತು "ಲಕ್ಷ್ಮಿ" ಎಂದರೆ "ಅದೃಷ್ಟ ಅಥವಾ ಸಂಪತ್ತು. ಎಂದರ್ಥ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಓಲೈಸುವ ಹಬ್ಬ ಇದಾಗಿದೆ.
ಮಾರುಕಟ್ಟೆಯಲ್ಲಿ ಖರೀದಿ ಭರಾಟೆ: ರಾಜ್ಯದಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಂಕಾರ್ಯಗಳು ನಡೆಯುತ್ತಿವೆ. ಹಬ್ಬ ಹಿನ್ನೆಲೆಯಲ್ಲಿ ವಿವಿಧ ಮಾರುಕಟ್ಟೆಗಳು ಜನರಿಂದ ತುಂಬಿ ತುಳುಕುತ್ತಿವೆ. ಇದಕ್ಕೆ ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಕೂಡ ಹೊರತಾಗಿಲ್ಲ. ಹಬ್ಬದ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿದೆ. ಹಬ್ಬಕ್ಕೆ ಬೇಕಾದ ಹೂವು-ಹಣ್ಣುಗಳನ್ನ ನಿನ್ನೆಯಿಂದಲೇ ಖರೀದಿಸುತ್ತಿದ್ದಾರೆ. ಬೆಲೆ ಏರಿಕೆಯ ಶಾಕ್ ತಟ್ಟಿದೆ. ಹೂವು, ಹಣ್ಣುಗಳ ಬೆಲೆಯಲ್ಲಿ ಡಬಲ್, ತ್ರಿಬಲ್ ಏರಿಕೆಯಾಗಿದೆ. ಹೀಗಿದ್ದರೂ ಕೂಡ ಬೆಳಗ್ಗೆಯಿಂದಲೇ ಜನರು ಹಬ್ಬಕ್ಕೆ ಬೇಕಾದ ಹೂ, ಹಣ್ಣು, ಖರೀದಿಸುವಲ್ಲಿ ಬ್ಯುಸಿಯಾಗಿದ್ದಾರೆ.
Advertisement