70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಕೇಂದ್ರ ವಾರ್ತಾ ಪ್ರಸಾರ ಮತ್ತು ಮಾಹಿತಿ ಸಚಿವಾಲಯ ಇಂದು ಪ್ರಕಟಿಸಿದೆ. ಅತ್ಯುತ್ತಮ ಜನಪ್ರಿಯ ಹಾಗೂ ಮನರಂಜನಾ ಚಿತ್ರವಾಗಿ ಎರಡು ವಿಭಾಗದಲ್ಲಿ 'ಕಾಂತಾರ' ಪ್ರಶಸ್ತಿ ಗಳಿಸಿದ್ದು, ಅಭಿನಯಕ್ಕಾಗಿ ನಟ ರಿಷಭ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಯಶ್ ನಟನೆಯ ಕೆಜಿಎಫ್-2 ಅತ್ಯುತ್ತಮ ಕನ್ನಡ ಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಸಾಹಸ ನಿರ್ದೇಶನ ವಿಭಾಗದಲ್ಲೂ ಕೆಜಿಎಫ್-2 ಪ್ರಶಸ್ತಿ ಗೆದ್ದಿದೆ. ಜನವರಿ 1, 2022 ರಿಂದ ಡಿಸೆಂಬರ್ 31,2022ರ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಪರಿಗಣಿಸಿ ಇದೀಗ ರಾಷ್ಟ್ರೀಯ ಪ್ರಶಸ್ತಿ ಘೋಷಿಸಲಾಗಿದೆ. 2023ರ ಮೇ ತಿಂಗಳಲ್ಲಿ ಈ ಪ್ರಶಸ್ತಿಗಳ ಘೋಷಣೆಯಾಗಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಪ್ರಶಸ್ತಿ ಘೋಷಣೆ ವಿಳಂಬವಾಗಿತ್ತು. ಕಾಂತಾರ ಸಿನಿಮಾ ಈಗಾಗಲೆ 10 ಫಿಲ್ಮ್‌ಫೇರ್ ಪ್ರಶಸ್ತಿ ಪಡೆದುಕೊಂಡಿದೆ. ಇದರ ಜೊತೆ 10 ಸೈಮಾ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೋಲ್ಕತಾದಲ್ಲಿ ತರಬೇತಿ ಪಡೆಯುತ್ತಿದ್ದ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಸಂಘ ನಾಳೆ ದೇಶಾದ್ಯಂತ ಮುಷ್ಕರ ನಡೆಸಲು ತೀರ್ಮಾನಿಸಿದೆ. ಮುಷ್ಕರದ ಪರಿಣಾಮ ರಾಜ್ಯದಲ್ಲಿ ಆರೋಗ್ಯ ಸೇವೆ ವ್ಯತ್ಯಯವಾಗಲಿದ್ದು, ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ. IMA , PHANA ಅಡಿಯಲ್ಲಿ ಬರುವ ಖಾಸಗಿ ಆಸ್ಪತ್ರೆಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6ರವರೆಗೂ ಓಪಿಡಿ ಬಂದ್ ಆಗಿರಲಿದೆ. ಮೆಡಿಕಲ್ ಶಾಪ್, ಇನ್ ಪೇಷೆಂಟ್ ಸೇವೆ, ಹೆರಿಗೆ, ಎಮರ್ಜೆನ್ಸಿ ಸರ್ಜರಿ ಸೇವೆಗಳು ಲಭ್ಯವಿರಲಿದ್ದು, ಡಯಾಲಿಸಿಸ್, ಕ್ಲಿನಿಕ್ ಸೇವೆ ಮಕ್ಕಳ ಓಪಿಡಿ, ಡೆಂಟಲ್ ಸರ್ವಿಸ್ ಸೇವೆಗಳು ಲಭ್ಯವಿರುವುದಿಲ್ಲ.
ತುಂಗಭದ್ರಾ ಜಲಾಶಯಕ್ಕೆ ಸ್ಟಾಪ್‌ಲಾಗ್ ಗೇಟ್ ಅಳವಡಿಸುವ ಕಾಮಗಾರಿ ಚುರುಕುಗೊಂಡಿದೆ. ತಾತ್ಕಾಲಿಕ ಗೇಟ್ ಅಳವಡಿಕೆಯಿಂದ 25 ಟಿಎಂಸಿ ನೀರು ಪೋಲಾಗುವುದನ್ನು ತಡೆಯುವುದಕ್ಕೆ ಸಾಧ್ಯವಿದೆ. ತುಂಡಾಗಿರುವ ಗೇಟ್ ಬಳಿ ಇರುವ ಚೈನ್ ಲಿಂಕ್ ಜೋಡಣೆಯನ್ನು ಪರಿಣಿತರು ಆರಂಭಿಸಿದ್ದಾರೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಕೆಲಸಗಾರರ ಜೊತೆ ಮಾತನಾಡಿದ್ದು, ಸ್ಟಾಪ್‌ಲಾಗ್ ಗೇಟ್ ಅಳವಡಿಸುವ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರಿಗೆ, ತಮ್ಮ ವೈಯಕ್ತಿಕ ಖರ್ಚಿನಲ್ಲಿ ತಲಾ 50 ಸಾವಿರ ರೂ ಪ್ರೋತ್ಸಾಹ ಧನ ನೀಡುವುದಾಗಿ ಭರವಸೆ ನೀಡಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯ ವೀಕ್ಷಣಾ ಉಪಗ್ರಹ (EOS-8) ನ್ನು ಉಡಾವಣೆ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಇಸ್ರೋ, SSLV-D3 ನಿಖರವಾಗಿ EOS-08 ನ್ನು ಕಕ್ಷೆಗೆ ಸೇರಿಸಿದ್ದು, ಮೂರನೇ ಅಭಿವೃದ್ಧಿ ವಾಹಕ ಉಡಾವಣೆ ಯಶಸ್ವಿಯಾಗಿದೆ ಎಂದು ಹೇಳಿದೆ. EOS-08 ಮಿಷನ್ ಅನ್ನು ಉಪಗ್ರಹ ಆಧಾರಿತ ಕಣ್ಗಾವಲು, ವಿಪತ್ತು ಮೇಲ್ವಿಚಾರಣೆ, ಪರಿಸರ ಮೇಲ್ವಿಚಾರಣೆ, ಅಪ್ಲಿಕೇಶನ್‌ಗಳಿಗಾಗಿ ಹಗಲು ಮತ್ತು ರಾತ್ರಿಯಲ್ಲಿ ಚಿತ್ರಗಳನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ. ತಂತ್ರಜ್ಞಾನ ವರ್ಗಾವಣೆಯೊಂದಿಗೆ, ಭಾರತೀಯ ಉದ್ಯಮ ಮತ್ತು ಎನ್ ಎಸ್ ಐಎಲ್ ಇಂಡಿಯಾ ಈಗ ಎಸ್ ಎಸ್ ಎಲ್ ವಿಯನ್ನು ವಾಣಿಜ್ಯ ಕಾರ್ಯಾಚರಣೆಗಳಿಗಾಗಿ ಬಳಸಲಿದೆ ಎಂದು ಇಸ್ರೊ ಹೇಳಿದೆ.
ಸಕಲೇಶಪುರದ ಆಚಂಗಿ-ದೊಡ್ಡಸಾಗರ ಬಳಿ ರೈಲ್ವೆ ಹಳಿ ಮೇಲೆ ಭೂಕುಸಿತ ಉಂಟಾಗಿ ಬೆಂಗಳೂರು-ಮಂಗಳೂರು (Bangaluru-Mangaluru) ನಡುವಿನ ರೈಲುಗಳ ಸಂಚಾರ ಸ್ಥಗಿತವಾಗಿದೆ. ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲು ಸಂಚಾರದಲ್ಲಿ ಇಂದು ವ್ಯತ್ಯಯವುಂಟಾಗಿದೆ. ಕಳೆದ ಒಂದು ವಾರದ ಹಿಂದೆ ಇದೇ ಜಾಗದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿತ್ತು. ಮಣ್ಣು ತೆರವು ಕಾರ್ಯಾಚರಣೆ ಮುಗಿದು ರೈಲ್ವೆ ಸಂಚಾರ ಆರಂಭವಾದ ಬಳಿಕ ಇದೀಗ ಮತ್ತೆ ಮಣ್ಣು ಕುಸಿದು ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲು ಬಾಳ್ಳುಪೇಟೆ ಬಳಿ ನಿಂತು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ತೆರಳುತ್ತಿದ್ದ ಪ್ರಯಾಣಿಕರು ರೈಲು ಸಂಚಾರ ಸ್ಥಗಿತವಾಗಿದ್ದರಿಂದ ನೂರಾರು ಪ್ರಯಾಣಿಕರು ಪರದಾಡಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ತೆರಳಿದ್ದು ತೆರವು ಕಾರ್ಯಾಚರಣೆ ನಡೆದಿದೆ.
Advertisement