ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಗವರ್ನರ್ ಅನುಮತಿ, ರಾಜೀನಾಮೆ ಪ್ರಶ್ನೆಯೇ ಇಲ್ಲ-ಸಿದ್ದರಾಮಯ್ಯ, ರಾಜ್ಯಪಾಲರ ವಿರುದ್ಧ ಪ್ರತಿಭಟನೆ, #TBDamಗೆ ಸ್ಟಾಪ್ ಗೇಟ್ ಅಳವಡಿಕೆ ಪೂರ್ಣ-ಇವು ಇಂದಿನ ಪ್ರಮುಖ ಸುದ್ದಿಗಳು-17-08-2024

siddaramaiah
ಸಂಗ್ರಹ ಚಿತ್ರ online desk

1. ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಗವರ್ನರ್ ಅನುಮತಿ

ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ, ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ಮನವಿ ಮಾಡಿದ್ದರು. ಸಿದ್ದರಾಮಯ್ಯ ವಿರುದ್ಧದ ದೂರಿನಲ್ಲಿ ಆರೋಪಗಳನ್ನು ಮೇಲ್ನೋಟಕ್ಕೆ ಪುಷ್ಟೀಕರಿಸುವ ದಾಖಲೆಗಳಿವೆ. ಹಾಗಾಗಿ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಕುರಿತು ತಟಸ್ಥ, ವಸ್ತುನಿಷ್ಠ ನಿಷ್ಪಕ್ಷಪಾತ ತನಿಖೆ ನಡೆಸುವ ಅಗತ್ಯವಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶದಲ್ಲಿ ತಿಳಿಸಿದ್ದಾರೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನಿಡಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸಿಎಂ ರಾಜೀನಾಮೆಗೆ ಒತ್ತಾಯಿಸಿವೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ರಾಜ್ಯಪಾಲರು ತಮ್ಮ ಸಂವಿಧಾನದತ್ತ ಅಧಿಕಾರ ಚಲಾಯಿಸಿ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದ್ದಾರೆ. ಆದ್ದರಿಂದ ಸಿಎಂ ಭಂಡತನ ಬಿಟ್ಟು ರಾಜೀನಾಮೆ ನೀಡಬೇಕೆಂದು ಹೇಳಿದ್ದರೆ. ರಾಜ್ಯಪಾಲರ ಅನುಮತಿ ಬಿಜೆಪಿ ಪಾದಯಾತ್ರೆಗೆ ಸಿಕ್ಕ ಯಶಸ್ಸು ಎಂದಿರುವ ಪ್ರತಿಪಕ್ಷ ನಾಯಕ ಆರ್‌.ಅಶೋಕ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು, ಸಿಬಿಐ ತನಿಖೆಯಾಗಬೇಕು ಎಂದು ಹೇಳಿದ್ದಾರೆ.

2. ಪ್ರಾಸಿಕ್ಯೂಷನ್ ಗೆ ಅನುಮತಿ ನನ್ನ ವಿರುದ್ಧದ ಷಡ್ಯಂತ್ರ ರಾಜೀನಾಮೆ ನೀಡಲ್ಲ-ಸಿದ್ದರಾಮಯ್ಯ

ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಷಡ್ಯಂತ್ರ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ರಾಜ್ಯಪಾಲರ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಇನ್ನು ಕಾಂಗ್ರೆಸ್ ಹೈ ಕಮಾಂಡ್, ಡಿಸಿಎಂ ಆದಿಯಾಗಿ ಎಲ್ಲಾ ಶಾಸಕರು, ಸಚಿವರು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ. ಬೆಳವಣಿಗೆ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮುಖ್ಯಮಂತ್ರಿಗಳನ್ನು ಬಿಟ್ಟುಕೊಡುವ ಪ್ರಶ್ನೆಯೇ ಒಲ್ಲ. ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ್ ಅನುಮತಿ ನೀಡಿರುವುದನ್ನು ಖಂಡಿಸಿ ಮೈಸೂರು ಸೇರಿದಂತೆ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬೆನ್ನಲ್ಲೇ ಕರ್ನಾಟಕ ಹೈಕೋರ್ಟ್ ನಲ್ಲಿ ಕೇವಿಯಟ್ ಅರ್ಜಿ ದಾಖಲಾಗಿದೆ. ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇನಾದರೂ, ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದರೆ ಆಗ ನಮ್ಮ ವಾದ ಆಲಿಸದೆ ಯಾವುದೇ ಆದೇಶ ಮಾಡಬಾರದು ಎಂದು ಕೇವಿಯೆಟ್ ಅರ್ಜಿದಾರರು ಕೋರಿದ್ದಾರೆ.

3. ಮಳೆ: ಆಟೋ ಚಾಲಕ ಸಾವು

ಶುಕ್ರವಾರ ಸಂಜೆ ಸುರಿದ ಭಾರೀ ಮಳೆಗೆ ವಿಜಯನಗರದ ಎಂಸಿ ಲೇಔಟ್ ಬಳಿ ಮರವೊಂದು ಆಟೋ ರಿಕ್ಷಾದ ಮೇಲೆ ಬಿದ್ದು, ಚಾಲಕ ಪ್ರಾಣ ಕಳೆದುಕೊಂಡಿದ್ದಾರೆ. ಶಿವರುದ್ರಯ್ಯ ಘಟನೆಯಲ್ಲಿ ಮತಪಟ್ಟಿದ್ದಾರೆ. ಬಿಬಿಎಂಪಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಬಿಎಲ್‌ಜಿ ಸ್ವಾಮಿ, ಈ ಬಗ್ಗೆ ಮಾಹಿತಿ ನೀಡಿದ್ದು, ಗಾಯಗೊಂಡ ಚಾಲಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿಗೆ ಹೋಗುವಷ್ಟರಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ತಿಳಿಸಿದ್ದು, ಪಾಲಿಕೆ ನಿಯಮಾವಳಿಗಳ ಪ್ರಕಾರ ಸಂತ್ರಸ್ತ ಕುಟುಂಬ ಸದಸ್ಯರಿಗೆ ಪರಿಹಾರವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

4. ನಮ್ಮ ಮೆಟ್ರೋ 3 ನೇ ಹಂತದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು ನಮ್ಮ ಮೆಟ್ರೋ 3 ನೇ ಹಂತದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 15,611 ಕೋಟಿ ರೂ. ಕಾಮಗಾರಿ ಇದಾಗಿದ್ದು, 2 ಹೊಸ ಕಾರಿಡಾರ್ ನಲ್ಲಿ 30 ನಿಲ್ದಾಣಗಳಿರಲಿವೆ. ಕಾರಿಡಾರ್-1 ನಲ್ಲಿ ಜೆಪಿ ನಗರದ ನಾಲ್ಕನೇ ಹಂತದಿಂದ ಕೆಂಪಾಪುರದವರೆಗೆ 21 ಸ್ಟೇಷನ್​ಗಳು ಇದ್ದು, 32.15 ಕಿಮೀ ವಿಸ್ತೀರ್ಣವಿದೆ. ಕಾರಿಡಾರ್- 2 ನಲ್ಲಿ ಹೊಸಹಳ್ಳಿ ಯಿಂದ ಕಡಬಗೆರೆಯವರೆಗೆ ಒಂಬತ್ತು ಸ್ಟೇಷನ್​ಗಳಿದ್ದು, 12.50 ಕಿಮೀ ಮಾರ್ಗ ಇದಾಗಿದೆ. ಈ ಮೂಲಕ ಮೆಟ್ರೋ ವ್ಯಾಪ್ತಿಯ ಒಟ್ಟು ವಿಸ್ತೀರ್ಣ 220.20 ಕಿ.ಮೀ ಹೊಂದಲಿದೆ.

5. TBDamಗೆ ಸ್ಟಾಪ್ ಗೇಟ್ ಅಳವಡಿಕೆ ಪೂರ್ಣ

ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ದುರಸ್ತಿ ಕಾಮಗಾರಿ ಭಾಗವಾಗಿದ್ದ ಸ್ಟಾಪ್​ ಲಾಗ್ ಗೇಟ್ ಅಳವಡಿಕೆ ಇಂದು ಪೂರ್ಣಗೊಂಡಿದೆ. ನೆನ್ನೆ ಮೊದಲ ಎಲಿಮೆಂಟ್ ಅಳವಡಿಕೆ ಮಾಡಲಾಗಿತ್ತು. ಇಂದು ಸ್ಟಾಪ್ ಲಾಗ್ ಗೇಟ್ ನ 4 ಎಲಿಮೆಂಟ್ ಗಳ ಅಳವಡಿಕೆ ಪೂರ್ಣಗೊಂಡಿದ್ದು, ನೀರು ಪೋಲಾಗುವುದು ನಿಂತಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com