ಮುಡಾ ಹಗರಣ: ಸಿಎಂಗೆ ತಾತ್ಕಾಲಿಕ ರಿಲೀಫ್; ಆ.29ರವರೆಗೆ ವಿಚಾರಣೆ ಮುಂದೂಡುವಂತೆ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ

ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರೆ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಕೀಲ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಆಗಿರುವ ತುಷಾರ್ ಮೆಹ್ತಾ ಅವರು ವಾದ ಮಂಡಿಸಿದರು.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿರುವುದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 29ಕ್ಕೆ ಮುಂದೂಡಿದೆ.

ಕರ್ನಾಟಕ ಹೈಕೋರ್ಟ್ ನಲ್ಲಿ ಸಿಎಂ ಪರ ವಕೀಲರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿದೆ. ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸುವಂತೆ ಸಲ್ಲಿಕೆಯಾಗಿರುವ ಅರ್ಜಿಗಳ ಆದೇಶವನ್ನು ಆಗಸ್ಟ್ 29ಕ್ಕೆ ಮುಂದೂಡುವಂತೆ ಜನಪ್ರತಿನಿಧಿಗಳ ಕೋರ್ಟ್ ಗೆ ಹೈಕೋರ್ಟ್ ಸೂಚಿಸಿದ್ದು ಈ ಮೂಲಕ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಸಾಮಾಜಿಕ ಹೋರಾಟಗಾರರಾದ ಸ್ನೇಹಮಯಿ ಕೃಷ್ಣ ಮತ್ತು ಟಿಜೆ ಅಬ್ರಹಾಂ ಅವರು ಸಲ್ಲಿಸಿರುವ ದೂರುಗಳ ಆದೇಶ ಆಗಸ್ಟ್ 20 ಮತ್ತು 21ರಂದು ವಿಶೇಷ ನ್ಯಾಯಾಲಯ ನೀಡಲಿದೆ ಎಂದು ಅರ್ಜಿದಾರರ ಪರ ವಕೀಲರು ಸೂಚಿಸಿದ ನಂತರ ಮಧ್ಯಂತರ ಆದೇಶವನ್ನು ನೀಡಲಾಗಿದೆ. ಅಲ್ಲದೆ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ದೂರುದಾರರಾದ ಪ್ರತಿವಾದಿಗಳಿಗೆ ಕಾಲಾವಕಾಶ ನೀಡಿದೆ.

ಸಿದ್ದರಾಮಯ್ಯ
ಬೆಂಗಳೂರು: MUDA ಹಗರಣ ಸುದ್ದಿಗೋಷ್ಠಿ ವೇಳೆ ಕಾಂಗ್ರೆಸ್‌ ಕಾರ್ಯಕರ್ತ ಹೃದಯಸ್ತಂಭನದಿಂದ ಸಾವು

ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ದೂರಿನ ಬೆನ್ನಲ್ಲೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ರಾಜ್ಯಪಾಲರ ಶೋಕಾಸ್‌ ನೋಟಿಸ್‌ಗೆ ಉತ್ತರ ನೀಡಲಾಗಿತ್ತು. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ದೂರುಗಳು ದುರುದ್ದೇಶಪೂರಿತ. ಹೀಗಾಗಿ ಶೋಕಾಸ್‌ ನೋಟಿಸ್ ಹಿಂಪಡೆಯುವಂತೆ ಕ್ಯಾಬಿನೆಟ್ ಸಲಹೆ ನೀಡಿತ್ತು. ಕ್ಯಾಬಿನೆಟ್ ಸಲಹೆ ಪರಿಗಣಿಸದೇ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಆದೇಶಿಸಿದ್ದಾರೆ. ನೂರು ಪುಟಗಳ ಕ್ಯಾಬಿನೆಟ್ ಸಲಹೆಗೆ ಎರಡು ಪುಟಗಳ ಉತ್ತರ ನೀಡಿದ್ದಾರೆ. ರಾಜ್ಯಪಾಲರು ಒಂದೇ‌ ಒಂದು ಕಾನೂನಿನ ಅಂಶಕ್ಕೆ ಉತ್ತರಿಸಿಲ್ಲ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದೇಕೆಂದು ಕಾರಣ ನೀಡಿಲ್ಲ ಎಂದು ವಾದಿಸಿದರು.

ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಕೀಲ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಆಗಿರುವ ತುಷಾರ್ ಮೆಹ್ತಾ ಅವರು ರಾಜ್ಯಪಾಲರ ಮುಂದೆ ಅಭಿಯೋಜನಾ ಮಂಜೂರಾತಿ ಕೋರಿರುವ ಯಾವುದೇ ಅರ್ಜಿ ಬಾಕಿ ಉಳಿದಿಲ್ಲ. ಈ ಸಂಬಂಧ ಎಲ್ಲಾ ದಾಖಲೆಗಳು ಹಾಗೂ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದ ನೋಟಿಂಗ್‌ ಮತ್ತು ಕಡತಗಳನ್ನು ಸಲ್ಲಿಸಲಾಗುವುದು. ಆರೋಪಿತ ಅಪರಾಧಗಳನ್ನು ತನಿಖೆ ನಡೆಸಲು ಅನುಮತಿಸಲಾಗಿದೆ. ಹೀಗಾಗಿ, ರಾಜ್ಯಪಾಲರ ಆದೇಶಕ್ಕೆ ತಡೆ ನೀಡಬಾರದು ಎಂದು ಕೋರಿದ್ದಾರೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com