ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ಕೇಳಿ SIT ರಾಜ್ಯಪಾಲರಿಗೆ ಪತ್ರ ಬರೆದಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗಣಿ ಮತ್ತು ಖನಿಜ ನಿಯಮಗಳನ್ನು ಉಲ್ಲಂಘಿಸಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ 550 ಎಕರೆ ವಿಸ್ತೀರ್ಣದ ಗಣಿ ಗುತ್ತಿಗೆ ಮಂಜೂರು ಮಾಡಿದ್ದಾರೆ ಎಂಬ ಆರೋಪವಿದ್ದು, ಅಕ್ರಮ ಗಣಿಗಾರಿಕೆ ಕುರಿತು 2011ರಲ್ಲಿ ಲೋಕಾಯುಕ್ತರಾಗಿದ್ದ ಎನ್. ಸಂತೋಷ್ ಹೆಗ್ಡೆ ಅವರು ಸಲ್ಲಿಸಿದ್ದ ವರದಿ ಉಲ್ಲೇಖ ಆಧರಿಸಿ ಎಸ್ಐಟಿ ತನಿಖೆ ನಡೆಸುತ್ತಿದೆ. ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಭಾರತೀಯ ಕಾಯ್ದೆ, ಭಾರತೀಯ ದಂಡ ಸಂಹಿತೆ ಹಾಗೂ ಗಣಿ ಮತ್ತು ಖನಿಜ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಎಸ್ಐಟಿ ರಾಜ್ಯಪಾಲರಿಗೆ ಪತ್ರ ಬರೆದಿದೆ.
ರಾಜ್ಯ ಸರ್ಕಾರ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹೆಸರು ಬದಲಾವಣೆ ಮಾಡುವ ಯೋಜನೆಯಲ್ಲಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ದೇವರಾಜ ಅರಸು ಎಲೆಕ್ಟ್ರಾನಿಕ್ ಸಿಟಿ ಎಂದು ನಾಮಕರಣ ಮಾಡಲಾಗುವುದು, ದೇವರಾಜ ಅರಸು ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಬಹುಮತ ಸಿಕ್ಕ ಬಳಿಕ, ಬಿಜೆಪಿ ಜಾರಿಗೆ ತಂದಿದ್ದ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡುತ್ತೇವೆ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿಗೆ ಸಹಪಾಠಿಯೋರ್ವ ಚಾಕುವಿನಿಂದ ಇರಿದಿರುವ ಘಟನೆ ಮಂಗಳೂರಿನ ಪುತ್ತೂರಿನಲ್ಲಿ ವರದಿಯಾಗಿದೆ. ಕೊಂಬೆಟ್ಟು ಸರ್ಕಾರಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯ ಕೈಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಾಕುವಿನಿಂದ ಇರಿದಿದ್ದ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಅನ್ಯಕೋಮಿನ ವಿದ್ಯಾರ್ಥಿಗಳಾಗಿರುವುದರಿಂದ ಚೂರಿ ಇರಿದ ವಿದ್ಯಾರ್ಥಿಯ ಹೆಸರು ಬದಲಿಸಿ ಹೇಳುವಂತೆ ಶಿಕ್ಷಕಿ ಒತ್ತಡ ಹೇರಿದ್ದಾರೆ ಎಂದು ಅಪ್ರಾಪ್ತ ಬಾಲಕಿ ಆರೋಪ ಮಾಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಬಾಲಕಿಯ ಪೋಷಕರು, ಸ್ಥಳೀಯರು ಆಸ್ಪತ್ರೆ ಮುಂದೆ ಜಮಾಯಿಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಫುಟ್ಬಾಲ್ ಪಂದ್ಯದ ವೇಳೆ ಎರಡು ಕಾಲೇಜು ವಿದ್ಯಾರ್ಥಿಗಳ ನಡುವೆ ಗಲಭೆ ಉಂಟಾಗಿ, ತಂಡವೊಂದು ವಿದ್ಯಾರ್ಥಿಗಳನ್ನು ಅಪಹರಿಸಿ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಆ.14ರಂದು ಎರಡು ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಫುಟ್ಬಾಲ್ ಟೂರ್ನಮೆಂಟ್ ನಡೆದಿತ್ತು. ಈ ವೇಳೆ ತಂಡಕ್ಕೆ ಬೆಂಬಲಿಸಿದ ದ್ವೇಷದಲ್ಲಿ ಮತ್ತೊಂದು ತಂಡದ ವಿದ್ಯಾರ್ಥಿಗಳು ಆ.19 ರಂದು ಇವರನ್ನು ಅಪಹರಿಸಿದ್ದರು.
ಎರಡು ದಿನಗಳ ಹಿಂದೆ ವರದಿಯಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯ ವಿರುದ್ಧವೂ ದೂರು ದಾಖಲಾಗಿದೆ. ಹೆಚ್ಎಸ್ ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಯುವತಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ ಇದಾಗಿದ್ದು, ಪಾನಮತ್ತಳಾಗಿದ್ದ ಸಂತ್ರಸ್ತ ಯುವತಿ ಕಾರಿನಲ್ಲಿ ತನ್ನ ಆಟೋಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾಳೆ ಎಂದು ಆಟೋ ಚಾಲಕ ದೂರು ನೀಡಿದ್ದಾರೆ, ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.17 ರಂದು ಕೋರಮಂಗಲಕ್ಕೆ ಗೆಳೆಯನ ಜೊತೆ ಬಂದಿದ್ದ ಯುವತಿ ಪಾರ್ಟಿ ಮುಗಿಸಿಕೊಂಡು ಕಾರಿನಲ್ಲಿ ಹೋಗುತ್ತಿದ್ದಾಗ ಮಂಗಳ ಜಂಕ್ಷನ್ ಬಳಿ 3 ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ನಡೆಸಿದ್ದಾಳೆ ಎಂದು ಆರೋಪಿಸಲಾಗಿದೆ.
ಸಕಲೇಶಪುರ-ಬಾಳ್ಳುಪೇಟೆ ನಡುವಿನ ಮಂಗಳೂರು-ಬೆಂಗಳೂರು ರೈಲು ಹಳಿ ಮೇಲೆ ಗುಡ್ಡ ಕುಸಿತದಿಂದ ಬಿದ್ದಿದ್ದ ಮಣ್ಣು ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ರೈಲು ಸಂಚಾರ ಮತ್ತೆ ಆರಂಭಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂದು ಸಂಚರಿಸಬೇಕಿದ್ದ ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್ ಪ್ರೆಸ್ ರೈಲು ಮಾತ್ರ ರದ್ದಾಗಿದ್ದು, ಉಳಿದ ಎಲ್ಲಾ ರೈಲುಗಲು ನಿಗದಿತ ದಿನಾಂಕ ಹಾಗೂ ಸಮಯದ ಪ್ರಕಾರ ಸಂಚರಿಸಲಿದೆ. ಮಣ್ಣು ಕುಸಿತಗೊಂಡ ಸ್ಥಳದಲ್ಲಿ ರೈಲು ಸಂಚಾರದ ವೇಗಕ್ಕೆ ಮಿತಿ ಹೇರಲಾಗಿದೆ ಎಂದು ತಿಳಿಸಿದ್ದಾರೆ.
Advertisement