ಸಿಎಂ, ಡಿಸಿಎಂ ದೆಹಲಿಗೆ ಪ್ರಯಾಣ, ರಾಜ್ಯ ರಾಜಕಾರಣದ ಬಗ್ಗೆ ಹೈಕಮಾಂಡ್ ಗೆ ವಿವರಣೆ
ಸಿಎಂ ಸಿದ್ದರಾಮಯ್ಯ ನಾಳೆ ದೆಹಲಿಗೆ ತೆರಳಲಿದ್ದು, ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ ನಂತರ ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳ ಕುರಿತು ಹೈಕಮಾಂಡ್ ಗೆ ಸಿದ್ದರಾಮಯ್ಯ ವಿವರಣೆ ನೀಡಲಿದ್ದಾರೆ.
ಇನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧದ ಗಣಿ ಗುತ್ತಿಗೆ ಅನುಮತಿ ಆರೋಪ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ವಿರುದ್ಧದ ಪ್ರಕರಣ, ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣ ಸೇರಿ ಒಟ್ಟು 4 ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರಿಗೆ ಸಲಹೆಯನ್ನು ನೀಡಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನು ನಡೆಸಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್ ಕೆ ಪಾಟೀಲ್, ವಿಪಕ್ಷ ನಾಯಕರ ವಿರುದ್ಧದ ಪ್ರಾಸಿಕ್ಯೂಷನ್ ಬಗ್ಗೆ ಶೀಘ್ರವಾಗಿ ತೀರ್ಮಾನ ಕೈಗೊಳ್ಳಲು ರಾಜ್ಯಪಾಲರಿಗೆ ಆರ್ಟಿಕಲ್ 163 ಅನ್ವಯ ನೆರವು ಹಾಗೂ ಸಲಹೆ ನೀಡುವ ಸಂಪುಟ ಅಧಿಕಾರವನ್ನು ಬಳಿಸಿಕೊಳ್ಳಲಾಗಿದೆ ಎಂದು ವಿವರಿಸಿದರು. ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯ ವಿರುದ್ಧ ಸಚಿವ ಸಂಪುಟ ಸಭೆಯಲ್ಲಿನ ನಿರ್ಣಯದ ಮಾದರಿಯಲ್ಲೇ ಖಂಡನಾ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ, ಸಾಂವಿಧಾನಿಕ ಹುದ್ದೆಗೆ ಅಗೌರವ ತೋರುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು, ಸಚಿವರು ಮತ್ತು ಶಾಸಕರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಡಾ.ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರ ಬಳಸಿಕೊಂಡು ಮುಡಾಕ್ಕೆ ಪತ್ನಿ ಪಾರ್ವತಿ ಬರೆದಿರುವ ಪತ್ರವನ್ನು ತಿರುಚಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಅಶೋಕ್, ಸಿದ್ದರಾಮಯ್ಯ ಅವರ ಪತ್ನಿ ವಿಜಯನಗರದಲ್ಲೇ ಸೈಟು ಕೊಡಿ ಎಂದು ಪತ್ರ ಬರೆದಿದ್ದು ಬೆಳಕಿಗೆ ಬಂದಿದೆ. ಆದರೆ, ಸಿದ್ದರಾಮಯ್ಯ ಹಾಕಿದ ಭ್ರಷ್ಟಾಚಾರದ ಗಂಜಿಗೆ ಮುಡಾ ಅಧಿಕಾರಿಗಳು ಸಿಎಂ ಪತ್ನಿ ಬರೆದ ಪತ್ರದಲ್ಲಿನ ಸಾಲುಗಳಿಗೆ ವೈಟ್ನರ್ ಹಾಕಿ ಹಗರಣ ಮುಚ್ಚಿ ಹಾಕಲು ಸಾಕ್ಷ್ಯ ನಾಶ ಮಾಡಿದ್ದಾರೆ. ಎಲ್ಲ ಅನುಮಾನಗಳು ಬಗೆಹರಿಯಬೇಕಾದರೆ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಷ್ಪಕ್ಷಪಾತ, ಪಾರದರ್ಶಕ ತನಿಖೆಗೆ ಅನುವು ಮಾಡಿಕೊಡಬೇಕು ಎಂದು ಹೇಳಿದ್ದರೆ, ಮುಡಾ ಕಡತಗಳನ್ನು ಹೆಲಿಕಾಪ್ಟರ್ ನಲ್ಲಿ ಬಂದು ಹೊತ್ತೊಯ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಿರುದ್ಧ ಕಡತ ಕಳವು ಪ್ರಕರಣ ದಾಖಲಿಸಿ ಸರ್ಕಾರವನ್ನು ಅಮಾನತಿನಲ್ಲಿಡಬೇಕು ಎಂದು ಮಾಜಿ ಎಂಎಲ್ ಸಿ ಹೆಚ್ ವಿಶ್ವನಾಥ್ ಆಗ್ರಹಿಸಿದ್ದಾರೆ.
ಬೆಲೆ ಏರಿಕೆಯ ನಡುವೆ ಬೆಂಗಳೂರಿನಲ್ಲಿ ನೀರಿನ ಬಿಲ್ ಹೆಚ್ಚಳವಾಗುವುದನ್ನು ರಾಜ್ಯ ಸರ್ಕಾರ ಖಚಿತಪಡಿಸಿದೆ. ವಿಧಾನನಸೌಧದ ಮುಂಭಾಗದಲ್ಲಿ 110 ಹಳ್ಳಿಗೆ ಕಾವೇರಿ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿರುವ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಸಾರ್ವಜನಿಕರು, ಮಾಧ್ಯಮಗಳು ಏನೇ ಬಯ್ಯಲಿ, ವಿರೋಧ ಪಕ್ಷಗಳು ವಿರೋಧಿಸಿದರು ನೀರಿನ ದರ ಏರಿಕೆ ಮಾಡುವುದು ಖಚಿತ ಎಂದು ತಿಳಿಸಿದ್ದಾರೆ. ಅಕ್ರಮ ಆಸ್ತಿ ಪ್ರಕರಣದ ಸಂಬಂಧ ನೊಟೀಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಇಂದು ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದರು. ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣದ ತನಿಖೆ ನಡೆಸಲು ಸಿಬಿಐ ಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದು ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು.
ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರ ಮಂಗಳೂರು ನಿವಾಸದ ಮೇಲೆ ಅನಾಮಿಕ ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲ ನಡೆಯನ್ನು ಖಂಡಿಸಿ 2 ದಿನಗಳ ಹಿಂದೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಐವಾನ್ ಡಿಸೋಜಾ, ಬಾಂಗ್ಲಾದಲ್ಲಿ ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಆದಂತೆಯೇ ಇಲ್ಲಿಯೂ ನಿಮಗೆ ಆಗಲಿದೆ ಎಂದು ಹೇಳಿದ್ದರು. ಈ ಬೆನ್ನಲ್ಲೇ ವೇಲೆನ್ಸಿಯಾದಲ್ಲಿ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ಐವಾನ್ ಡಿಸೋಜಾ ಅವರ ನಿವಾಸದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಕಾರಿಗೆ ಬೈಕ್ ತಾಗಿದ್ದಕ್ಕೆ, ಬೈಕ್ ನಲ್ಲಿದ್ದ ಯುವಕನನ್ನು ಕಾರಿನಲ್ಲಿ ಅಟ್ಟಾಡಿಸಿ ಗುದ್ದಿ ಕೊಲೆ ಮಾಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರಿನ ವಿದ್ಯಾರಣ್ಯಪುರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಡೆಲಿವರಿ ಬಾಯ್ ಮಹೇಶ್ ಮೃತಪಟ್ಟಿರುವ ಯುವಕನಾಗಿದ್ದಾನೆ. ಯುವಕ ಹೆಲ್ಮೆಟ್ ಧರಿಸದ ಕಾರಣ ತಲೆಗೆ ಗಂಭೀರ ಪೆಟ್ಟಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆವೇಳೆಗೆ ಮೃತಪಟ್ಟಿದ್ದ ಎಂದು ವೈದ್ಯರು ಹೇಳಿದ್ದಾರೆ. ಪ್ರಕರಣದ ಸಂಬಂಧ ಇಬ್ಬರು ಯುವಕರನ್ನು ವಶಕ್ಕೆ ಪಡೆಯಲಾಗಿದೆ.
Advertisement