
ಹೊಸಪೇಟೆ: ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಅಣೆಕಟ್ಟೆಯಲ್ಲಿ ಕ್ರೆಸ್ಟ್ ಗೇಟ್ ದುರಸ್ತಿ ಮಾಡಿದ ನಂತರ, ಕಳೆದ ಮೂರು ದಿನಗಳ ಅವಧಿಯಲ್ಲಿ 7 ಟಿಎಂಸಿ ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಇದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಖ್ಯಾತ ಅಣೆಕಟ್ಟೆ ತಜ್ಞ, ನಿವೃತ್ತ ಎಂಜಿನಿಯರ್ ಕನ್ನಯ್ಯ ನಾಯ್ಡು ನೇತೃತ್ವದ ತಜ್ಞರ ತಂಡ ಕ್ರೆಸ್ಟ್ ಗೇಟ್ ಸಂಖ್ಯೆ 19ಕ್ಕೆ ಐದು ಸ್ಟಾಪ್‌ಲಾಗ್‌ಗಳನ್ನು ಯಶಸ್ವಿಯಾಗಿ ಅಳವಡಿಸಿದ್ದರು. ಇದಾದ, ಎರಡು ವಾರಗಳಲ್ಲಿ ಅಣೆಕಟ್ಟೆ ಮತ್ತೆ ಭರ್ತಿಯಾಗಲಿದೆ ಎಂದು ಅವರು ಭರವಸೆ ನೀಡಿದ್ದರು. ಡ್ಯಾಂನ ನೀರಿನ ಸಂಗ್ರಹ ಬುಧವಾರ 78 ಟಿಎಂಸಿ ಅಡಿ ಇತ್ತು. ಆಗಸ್ಟ್ ಮೊದಲ ವಾರದಲ್ಲಿ ಸ್ಟಾಪ್‌ಲಾಗ್ ಗೇಟ್ ಅಳವಡಿಸುವ ಕಾರ್ಯ ಪೂರ್ಣಗೊಂಡಾಗ ಅಣೆಕಟ್ಟಿನ ಸಂಗ್ರಹದ ಮಟ್ಟ 70 ಟಿಎಂಸಿ ಅಡಿ ಇತ್ತು. ಮೂರು ರಾಜ್ಯಗಳ ರೈತರ ಪ್ರಾರ್ಥನೆ ಮತ್ತು ಕ್ರೆಸ್ಟ್ ಗೇಟ್‌ಗೆ ಸ್ಟಾಪ್‌ಲಾಗ್‌ಗಳನ್ನು ಅಳವಡಿಸುವ ಕಠಿಣ ಪರಿಶ್ರಮದ ಕಾರಣ ತುಂಗಭದ್ರಾ ಅಣೆಕಟ್ಟಿನಲ್ಲಿ 7 ಟಿಎಂಸಿ ಅಡಿಗೂ ಹೆಚ್ಚು ನೀರನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಟಿಬಿ ಡ್ಯಾಂ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಖ್ಯವಾಗಿ, ಕಳೆದ ಮೂರು ದಿನಗಳಿಂದ ನೀರಿನ ಒಳಹರಿವು 36,000 ಕ್ಯೂಸೆಕ್‌ಗಿಂತ ಹೆಚ್ಚಿತ್ತು. ಅಣೆಕಟ್ಟಿಗೆ ನೀರು ಬರಲು ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆ ನಮ್ಮ ಪ್ರಮುಖ ಮೂಲವಾಗಿತ್ತು. ಕಳೆದ ನಾಲ್ಕು ದಿನಗಳಿಂದ ಎಲ್ಲಾ 33 ಕ್ರೆಸ್ಟ್ ಗೇಟ್‌ಗಳನ್ನು ಮುಚ್ಚಲಾಗಿದೆ. ಇನ್ನೂ ಎರಡು ವಾರಗಳ ಕಾಲ ಇದೇ ರೀತಿಯ ನೀರಿನ ಒಳಹರಿವು ಮುಂದುವರಿದರೆ, ಅಣೆಕಟ್ಟು ಸಂಪೂರ್ಣ ಸಂಗ್ರಹ ಸಾಮರ್ಥ್ಯವನ್ನು ನೋಡುತ್ತದೆ ಎಂದು ಅವರು ಹೇಳಿದರು.
Advertisement