ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಿಂದ ಸಿಎ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಳ್ಳಿಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಂಬಿ ಪಾಟೀಲ್, "ಸಿಎ ನಿವೇಶನ ಹಂಚಿಕೆಯಲ್ಲಿ ಯಾವುದೇ ನಿಯಮ ಉಲ್ಲಂಘಿಸಿಲ್ಲ. ಎಲ್ಲಾ ವಿಧಾನ ಅನುಸರಿಸಿ ಪಾರದರ್ಶಕವಾಗಿ ಹಂಚಿಕೆ ನಡೆದಿದೆ. ಕೆಲ ವಾರಗಳ ಹಿಂದೆ ಸಾಮಾಜಿಕ ಕಾರ್ಯಕರ್ತರೊಬ್ಬರು ಈ ಆರೋಪ ಮಾಡಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಅದೇ ಅರ್ಜಿಯನ್ನು ಮತ್ತೆ ನೀಡಲಾಗಿದೆ ಎಂದು ಹೇಳಿದರು.
377.69 ಎಕರೆಯಲ್ಲಿ 193 ನಿವೇಶನಗಳಿಗೆ ಅರ್ಜಿ ಆಹ್ವಾನಿಸಿದ್ದು, 43 ನಿವೇಶನಗಳನ್ನು ಮಾತ್ರ ಮಂಜೂರು ಮಾಡಲಾಗಿದೆ. ಉಳಿದ ನಿವೇಶನಗಳು ಇನ್ನೂ ಹಂಚಿಕೆಯಾಗಿಲ್ಲ. ನಿರ್ದಿಷ್ಟ ಸೈಟ್‌ಗೆ ಒಂದೇ ಅರ್ಜಿ ಸ್ವೀಕರಿಸಿದ ಸಂದರ್ಭಗಳಲ್ಲಿ, ಅರ್ಹ ಅರ್ಜಿದಾರರಿಗೆ ಅವಕಾಶ ಸಿಗುವಂತೆ ನೋಡಿಕೊಳ್ಳಲು ಮತ್ತೆ ಅರ್ಜಿಗಳನ್ನು ಕರೆಯಲಾಗುತ್ತಿದೆ ಎಂದು ಅವರು ಹೇಳಿದರು.
ಮೊದಲ ಬಾರಿಗೆ ಸಿಎ ಸೈಟ್‌ಗಳ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಶೇ. 24.10 ರಷ್ಟು ಮೀಸಲಾತಿ ಪರಿಚಯಿಸಲಾಗಿದೆ. ತಮ್ಮ ಅವಧಿಯಲ್ಲಿ ಸಿಎ ನಿವೇಶನಗಳ ದರ ಇಳಿಕೆ ಮಾಡಿಲ್ಲ ಎಂದು ತಿಳಿಸಿದರು.
Advertisement