ಬೆಂಗಳೂರು: ಪಾಕಿಸ್ತಾನದಲ್ಲಿ ಇತ್ತೀಚೆಗೆ ಮೊದಲ ಪ್ರಕರಣ ದೃಢಪಟ್ಟ ನಂತರ ಸಿಡುಬಿನಂತೆಯೇ ರೋಗಲಕ್ಷಣಗಳನ್ನು ಹೊಂದಿರುವ ವೈರಸ್ ಸೋಂಕಾದ ಎಂಪಾಕ್ಸ್ ಅಥವಾ ಮಂಕಿಪಾಕ್ಸ್ ನ ಬಗ್ಗೆ ಜನರ ಆತಂಕ ಹೆಚ್ಚಾಗಿದೆ. ಪಾಕಿಸ್ತಾನದಿಂದ ಅನೇಕ ಜನರು ವಲಸೆ ಬರುವುದರಿಂದ ಶೀಘ್ರದಲ್ಲೇ ಭಾರತದಲ್ಲಿಯೂ Monkeypox ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್( The New Indan Express) ನೊಂದಿಗೆ ಮಾತನಾಡಿರುವ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು, ಅಪಾಯವನ್ನು ಎದುರಿಸಲು ಮತ್ತು ರಾಜ್ಯದಾದ್ಯಂತ ಸನ್ನದ್ಧತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಶೀಘ್ರದಲ್ಲೇ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದರು.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮತ್ತು ಮಾನಿಟರಿಂಗ್ ಶಿಷ್ಠಾಚಾರಗಳನ್ನು ಶೀಘ್ರದಲ್ಲೇ ಜಾರಿಗೆ ತರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನ ನಿಲ್ದಾಣಗಳು ಎಂಪಾಕ್ಸ್‌ಗೆ ಸೋಂಕಿನ ಪ್ರಮುಖ ನೆಲೆಯಾಗಿರುತ್ತವೆ. ಇಲ್ಲಿ ದೇಶ ವಿದೇಶಗಳಿಂದ ನಿತ್ಯವೂ ಸಾವಿರಾರು ಜನರು ಬಂದು ಹೋಗುತ್ತಿರುತ್ತಾರೆ. ಮಂಕಿಪಾಕ್ಸ್ ಪೀಡಿತ ಪ್ರದೇಶಗಳಿಂದ ಭಾರತಕ್ಕೆ ವೈರಸ್ ಹರಡುವುದನ್ನು ಪತ್ತೆಹಚ್ಚಲು ಮತ್ತು ತಡೆಗಟ್ಟಲು ಈ ಕ್ರಮಗಳು ನಿರ್ಣಾಯಕವಾಗಿವೆ ಎನ್ನುತ್ತಾರೆ ಅಧಿಕಾರಿಗಳು.
MPOX ಎಂದರೇನು, ಲಕ್ಷಣಗಳೇನು?
ಏಸ್ಟರ್ ಸಿಎಂಐ ಆಸ್ಪತ್ರೆಯ ಸಾಂಕ್ರಾಮಿಕ ರೋಗ ಮತ್ತು ಪ್ರಯಾಣ ಔಷಧ ವಿಭಾಗದ ಸಲಹೆಗಾರ್ತಿ ಡಾ ಸ್ವಾತಿ ರಾಜಗೋಪಾಲ್, Mpox ಜ್ವರ ತರಹದ ರೋಗಲಕ್ಷಣಗಳನ್ನು ಹೊಂದಿದ್ದು, ದೇಹದಲ್ಲಿ ದದ್ದುಗಳು ಕಂಡುಬರುವ ಅಪರೂಪದ ವೈರಲ್ ಸೋಂಕು ಆಗಿದೆ. ಸಾಮಾನ್ಯವಾಗಿ, ಬಟ್ಟೆ ಅಥವಾ ಹಾಸಿಗೆಯಂತಹ ಕಲುಷಿತ ವಸ್ತುಗಳ ಮೂಲಕ ಪ್ರಸಾರವಾಗುತ್ತದೆ. ಜ್ವರ, ಶೀತ, ತಲೆನೋವು, ದೇಹದ ನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು ಮತ್ತು ಆಯಾಸ ಇದರ ಪ್ರಮುಖ ಲಕ್ಷಣಗಳು, ಜ್ವರ ಪ್ರಾರಂಭವಾದ 1ರಿಂದ4 ದಿನಗಳ ನಂತರ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ದದ್ದುಗಳು ನಂತರ ಕೀವು ತುಂಬಿದ ಗುಳ್ಳೆಗಳಾಗುತ್ತವೆ.
ಏನು ಮಾಡಬಹುದು?
ಫೋರ್ಟಿಸ್ ಆಸ್ಪತ್ರೆಯ ಆಂತರಿಕ ಮೆಡಿಸಿನ್‌ನ ಹಿರಿಯ ಸಲಹೆಗಾರ ಡಾ.ಅನಂತ ಪದ್ಮನಾಭ ಅವರು, ರಾಜ್ಯ ಸರ್ಕಾರಗಳು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುತ್ತಾರೆ. ಪ್ರಕರಣಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಕ್ವಾರಂಟೈನ್‌ಗಾಗಿ ಸ್ಪಷ್ಟ ಪ್ರೋಟೋಕಾಲ್‌ಗಳನ್ನು ಜಾರಿಗೆ ತರಬೇಕು. ಕಣ್ಗಾವಲು ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಹೆಚ್ಚಿಸುವುದು ಪ್ರಮುಖ ಕ್ರಮಗಳಾಗಿವೆ. ಸರ್ಕಾರಗಳು ಲಸಿಕೆಗಳು, ಚಿಕಿತ್ಸಕಗಳು ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳನ್ನು (PPE) ಇಟ್ಟುಕೊಳ್ಳಬೇಕು. ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಬೇಕು. ತಡೆಗಟ್ಟುವ ತಂತ್ರಗಳ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡಲು ಸಾರ್ವಜನಿಕ ಜಾಗೃತಿ ಅಭಿಯಾನಗಳು ಅತ್ಯಗತ್ಯ ಎನ್ನುತ್ತಾರೆ ತಜ್ಞರು.
Advertisement