
ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದ ಲೆಕ್ಕಪರಿಶೋಧಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ಸಂಬಂಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಅಧಿಕಾರಿಗಳಾದ ಪದ್ಮನಾಭ, ಪರುಶುರಾಮ್ ಅವರ ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿ ಎಸ್‌ಐಟಿ ಅಧಿಕಾರಿಗಳ ತಂಡ 300 ಪುಟಗಳ ಚಾರ್ಜ್‌ಶೀಟ್ ಅನ್ನು ಶಿವಮೊಗ್ಗ ಕೋರ್ಟ್‌ಗೆ ಸಲ್ಲಿಸಿದ್ದಾರೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್) ಖಾತೆ ಅಧೀಕ್ಷಕ 52 ವರ್ಷದ ಪಿ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ಶಿವಮೊಗ್ಗದ ನ್ಯಾಯಾಲಯಕ್ಕೆ 300 ಪುಟಗಳ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸಿದೆ. ಆದರೆ, ಚಾರ್ಜ್‌ಶೀಟ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಯಾವುದೇ ಮಾಜಿ ಸಚಿವರು ಅಥವಾ ಯಾವುದೇ ಶಾಸಕರ ಹೆಸರನ್ನು ಉಲ್ಲೇಖಿಸಿಲ್ಲ. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ತನ್ನ ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ಸಚಿವರೊಬ್ಬರನ್ನು ಹೊಣೆಗಾರರನ್ನಾಗಿ ಮಾಡಿರುವುದನ್ನು ಮಾತ್ರ ಸೂಚಿಸಿದ್ದಾರೆ.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ್ ಮತ್ತು ಲೆಕ್ಕಾಧಿಕಾರಿ ಪರಶುರಾಮ್ ದುರ್ಗಣ್ಣನವರ್ ಅವರ ಒತ್ತಡಕ್ಕೆ ಮಣಿದು ಚಂದ್ರಶೇಖರನ್ ಅವರು ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಅಮಾನತುಗೊಂಡಿದ್ದ ಇಬ್ಬರೂ ಅಧಿಕಾರಿಗಳನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಮೇ 27, 2024 ರಂದು, ಚಂದ್ರಶೇಖರನ್ ಅವರ ಪತ್ನಿ ಕವಿತಾ ಅವರು ಶಿವಮೊಗ್ಗ ಜಿಲ್ಲೆಯ ವಿನೋಭನಗರ ಪೊಲೀಸ್ ಠಾಣೆಯಲ್ಲಿ ತಮ್ಮ ಪತಿ ಶಿವಮೊಗ್ಗದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನಂತರ ದೂರು ದಾಖಲಿಸಿದ್ದರು. ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ (IPC 306) ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಮೇ 31 ರಂದು ಸರ್ಕಾರವು ಪ್ರಕರಣದ ತನಿಖೆಗಾಗಿ ಸಿಐಡಿ ಘಟಕದಲ್ಲಿ ಎಸ್‌ಐಟಿ ರಚಿಸಿತು.
ಚಂದ್ರಶೇಖರನ್ ಅವರ ಆತ್ಮಹತ್ಯೆಯಿಂದ 187 ಕೋಟಿ ರೂಪಾಯಿ ಹಗರಣ ಬಹಿರಂಗನವಾಯಿತು. ಇದು ಬುಡಕಟ್ಟು ಕಲ್ಯಾಣ ಸಚಿವ ಬಿ ನಾಗೇಂದ್ರ ರಾಜೀನಾಮೆಗೆ ಕಾರಣವಾಯಿತು. ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ನಾಗೇಂದ್ರ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಆರೋಪಿಗಳ ವಿರುದ್ಧ ಎಸ್‌ಐಟಿ ಈ ಹಿಂದೆ 3,072 ಪುಟಗಳ ಆರೋಪಪಟ್ಟಿ ಸಲ್ಲಿಸಿತ್ತು. ಆ ಆರೋಪಪಟ್ಟಿಯಲ್ಲಿಯೂ ನಾಗೇಂದ್ರ ಅಥವಾ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಹಾಗೂ ಪಾಲಿಕೆ ಅಧ್ಯಕ್ಷ ಬಸನಗೌಡ ದಡ್ಡಲ್ ಅವರ ಹೆಸರು ಪ್ರಸ್ತಾಪವಾಗಿರಲಿಲ್ಲ.
ಇನ್ನೂ ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರಶೇಖರನ್ ಅವರ ಪತ್ನಿ ಕವಿತಾ, ಎಸ್‌ಐಟಿ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ, ನಾವು ಹೈಕೋರ್ಟ್‌ಗೆ ಹೋಗುತ್ತೇವೆ. ಈ ವಿಚಾರದಲ್ಲಿ ಎಸ್‌ಐಟಿ ನನ್ನ ಪತಿ ಮೇಲೂ ಆರೋಪ ಮಾಡಿದೆ ಆದರೆ ಅವರು ಅದರಲ್ಲಿ ಭಾಗಿಯಾಗಿಲ್ಲ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು. ಒಂದು ಕಡೆ ನಾವು ನನ್ನ ಪತಿ ಕಳೆದುಕೊಂಡ ನೋವಿನಲ್ಲಿದ್ದರೆ ಇನ್ನೊಂದು ಕಡೆ ನನ್ನ ಗಂಡನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದ ಬೇಸರ ವ್ಯಕ್ತ ಪಡಿಸಿದ್ದಾರೆ.
Advertisement