ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೀಳಿಸಲು ಸಂಚು ನಡೆಯುತ್ತಿದೆ. ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿ 100 ಕೋಟಿ ರೂಪಾಯಿ ಆಫರ್ ನೀಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರವಿಕುಮಾರ್, ನಮ್ಮ ಸರ್ಕಾರ ಬಂಡೆಯಂತೆ ಗಟ್ಟಿಯಾಗಿದೆ, ಅಲುಗಾಡಿಸಲು ಆಗಲ್ಲ. ಆದರೆ, ಬಿ.ಎಲ್ ಸಂತೋಷ್, ಶೋಭಾ ಕರಂದ್ಲಾಜೆ, ಹೆಚ್.ಡಿ.ಕುಮಾರಸ್ವಾಮಿ ಮತ್ತು ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯ ಬ್ರೋಕರ್ಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. ಸುಮಾರು 50 ಮಂದಿ ಶಾಸಕರನ್ನು ಸಂಪರ್ಕ ಮಾಡಿದ್ದಾರೆ. ನನಗೂ ಕರೆ ಮಾಡಿ ಆಫರ್ ಮಾಡಿದ್ದಾರೆ. ನಾವು ಸಾಕ್ಷಿ ಕಲೆ ಹಾಕುತ್ತಿದ್ದು ಇಡಿ ಅಧಿಕಾರಿಗಳಿಗೆ ಕೊಡುತ್ತೇವೆ ಎಂದರು.
ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿ 100 ಕೋಟಿ ರೂ. ಆಫರ್ ಮಾಡಿದೆ ಎಂಬ ಗಂಭೀರ ಆರೋಪ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಶಾಸಕ ರವಿ ಗಣಿಗ ವಿರುದ್ಧ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ್ ದೂರು ನೀಡಿದ್ದಾರೆ. ರವಿ ಗಣಿಗ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದು, ಠಾಣೆ ಮುಂದೆ ರವಿ ಗಣಿಗ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಸುಳ್ಳು ಹಾಗೂ ಸಾಕ್ಷಿರಹಿತ ಮತ್ತು ರಾಜಕೀಯ ದುರುದ್ದೇಶಪೂರ್ವಕವಾಗಿ ಮತ್ತು ತೆಜೋವಧೆ ಮಾಡುವ ದುರುದ್ದೇಶದಿಂದ ಮಾಧ್ಯಮದ ಮುಂದೆ ಸುಳ್ಳು ಹೇಳಿಕೆಯನ್ನು ನೀಡಿದ್ದು ಕಾನೂನು ಬಾಹಿರ ಮತ್ತು ಅಪರಾಧಿಕ ಹೇಳಿಕೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಜಿಂದಾಲ್ ಕಂಪನಿಗೆ ನೀಡಿದ ಭೂಮಿಯನ್ನು ಬಿಜೆಪಿ ಸರ್ಕಾರದ ತೀರ್ಮಾನದ ಪ್ರಕಾರ ಜಾರಿ ಮಾಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಸರ್ಕಾರದ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. 2021ರ ಮೇ 6ರಂದು ಅಂದು ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜಿಂದಾಲ್ ಕಂಪನಿಗೆ 3,666 ಎಕರೆ ಕೊಡಲು ತೀರ್ಮಾನಿಸಿತ್ತು. ಅದರಂತೆ ನಾವು ಜಿಂದಾಲ್ ಗೆ ಭೂಮಿ ನೀಡಿದ್ದೇವೆ. ಇದರಲ್ಲಿ ಯಾವ ಅಕ್ರಮವೂ ನಡೆದಿಲ್ಲ. ಈ ವಿಷಯದಲ್ಲಿ ಸರ್ಕಾರ ಒಳ ಒಪ್ಪಂದ ಮಾಡಿಕೊಂಡಿದ್ದು ಕಡಿಮೆ ಬೆಲೆಗೆ ಭೂಮಿಯನ್ನು ನೊಂದಣಿ ಮಾಡಿಕೊಟ್ಟಿದೆ ಎಂಬ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಆರೋಪ ನಿರಾಧಾರ ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಎರಡೂವರೆ ತಿಂಗಳು ಆಗಿಬರುತ್ತಿದೆ. ಇನ್ನು ಇದೇ ಮೊದಲ ಬಾರಿಗೆ ಜೈಲಿನಲ್ಲಿ ದರ್ಶನ್ ಇರುವ ಮೊದಲ ಫೋಟೋ ಬಿಡುಗಡೆಯಾಗಿದೆ. ಸ್ಪೇಷಲ್ ಬ್ಯಾರಕ್ ಹೊರಗೆ ನಟ ದರ್ಶನ್ ಕುಳಿತಿರುವ ಫೋಟೋ ವೈರಲ್ ಆಗಿದೆ. ರೌಡಿ ವಿಲ್ಸನ್ ಗಾರ್ಡನ್ ನಾಗ, ರೇಣುಕಾಸ್ವಾಮಿ ಕೊಲೆ ಪ್ರಕರಣದ 11ನೇ ಆರೋಪಿ ನಾಗರಾಜ್ ಜೊತೆ ದರ್ಶನ್ ಸಿಗರೇಟು ಸೇದುತ್ತಿರುವುದು ಕಂಡುಬಂದಿದೆ. ಎರಡು ದಿನಗಳ ಹಿಂದೆ ಸಿಸಿಬಿ ದಾಳಿ ಮಾಡಿದ್ದ ಸಂದರ್ಭದಲ್ಲಿ ಈ ಫೋಟೋ ತೆಗೆಯಲಾಗಿತ್ತು. ಇನ್ನು ದರ್ಶನ್ ಗೆ ಜೈಲಿನಲ್ಲಿ ಐಷಾರಾಮಿ ಸವಲತ್ತು ಸಿಗುತ್ತಿದೆ. ಅವರು ಜೈಲಿನಲ್ಲಿದ್ದಾರೆ ಅಥವಾ ರೆಸಾರ್ಟ್ ನಲ್ಲಿದ್ದಾರೆ ಎಂಬ ಅನುಮಾನ ಮೂಡಿದೆ. ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ರೇಣುಕಾಸ್ವಾಮಿ ಸ್ವಾಮಿ ತಂದೆ ಶಿವನಗೌಡ ಕಣ್ಣೀರು ಹಾಕಿದ್ದಾರೆ.
ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಆ.26ರಂದು ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ. ಈ ಸಂಬಂಧ ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಆ.26ರಂದು ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ಮಾಂಸ ಮಾರಾಟದ ಅಂಗಡಿಗಳು, ಕೋಳಿ ಅಂಗಡಿಗಳು, ಮೀನುಮಾರಾಟ ಮಾಡಬಾರದು. ಆದೇಶ ಮೀರಿ ಮಾರಾಟ ಮಾಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದ್ದಾರೆ.
Advertisement