ಹಾವೇರಿ: ಗೃಹಲಕ್ಷ್ಮಿ ಹಣ ಕೂಡಿಟ್ಟು ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟ ಅತ್ತೆ!
ಹಾವೇರಿ: ಗೃಹಲಕ್ಷ್ಮೀ ಹಣವನ್ನ ಕೂಡಿಟ್ಟು ಅತ್ತೆಯೊಬ್ಬರು ಸೊಸೆಗಾಗಿ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟ ಅಪರೂಪದ ಘಟನೆಗೆ ಹಾವೇರಿ ಜಿಲ್ಲೆ ಸಾಕ್ಷಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವು ರಾಜ್ಯದ ಹೆಣ್ಣುಮಕ್ಕಳಿಗಾಗಿ ತನ್ನ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಾಗ ವಿರೋಧಿಗಳು ಅದರ ಬಗ್ಗೆ ಅಪಸ್ವರ ಎತ್ತಿದ್ದರು. ಮನೆಯಲ್ಲಿ ಅತ್ತೆ-ಸೊಸೆ ಇದ್ದರೆ ಗೃಹಲಕ್ಷ್ಮಿ ಹಣ ಯಾರಿಗೆ ಸಂದಾಯವಾಗುತ್ತದೆ ಎಂದು ಮಿಲಿಯನ್ ಡಾಲರ್ ಪ್ರಶ್ನೆಯನ್ನು ಎತ್ತಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ ಶಿಗ್ಗಾವಿಯ ಅತ್ತೆ-ಸೊಸೆ ಜೋಡಿ ಮಾದರಿಯಾಗಿ ನಡೆದುಕೊಂಡಿದ್ದಾರೆ.
ಗೃಹಲಕ್ಷ್ಮಿ ಹಣದಲ್ಲಿ ಒಂದು ಪೈಸೆಯನ್ನೂ ಪೋಲು ಮಾಡದ ಅತ್ತೆ ಕಳೆದ 10 ತಿಂಗಳಿಂದ ಅಷ್ಟನ್ನೂ ಕೂಡಿಟ್ಟು, 20 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹಿಸಿ ಸೊಸೆಯ ಕೈಗೆ ಕೊಟ್ಟಿದ್ದಾರೆ. ನೀರಲಗಿ ಗ್ರಾಮದ ದ್ರಾಕ್ಷಾಯಿಣಿ ತಮ್ಮ 10 ಕಂತಿನ ಗೃಹಲಕ್ಷ್ಮಿ ಹಣ ಕೂಡಿಟ್ಟಿದ್ದರು. 10 ಕಂತಿನ 20,000 ರೂಪಾಯಿ ಹಣ ಕೂಡಿಟ್ಟು ಸೊಸೆ ಕುಮಾರಿ ಶಿವನಗೌಡ ಪಾಟೀಲ್ಗೆ ಮನೆಯಲ್ಲೇ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟಿದ್ದಾರೆ. ಅತ್ತೆ ಕಾರ್ಯಕ್ಕೆ ನೀರಲಗಿ ಗ್ರಾಮಸ್ಥರು ಭೇಷ್ ಎಂದಿದ್ದಾರೆ. ಶ್ರಾವಣ ಮಂಗಳವಾರದ ಶುಭದಿನದಂದೇ ಫ್ಯಾನ್ಸಿ ಸ್ಟೋರ್ ಗೆ ಪೂಜೆ ಮಾಡಿ ಚಾಲನೆ ನೀಡಲಾಗಿದೆ. ಅತ್ತೆ-ಸೊಸೆ ಸಂಭ್ರಮದಿಂದ ಫ್ಯಾನ್ಸಿ ಸ್ಟೋರ್ ಶುರು ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ