ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ಗೆ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಲಾಗುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಅವರನ್ನು ಗುರುವಾರ ಬೆಳಗ್ಗೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗುತ್ತಿದ್ದು ಇನ್ನು ಕೆಲವೇ ಹೊತ್ತಿನಲ್ಲಿ ಅಲ್ಲಿಗೆ ತಲುಪಲಿದ್ದಾರೆ.
ಇಂದು ಮುಂಜಾನೆಯೇ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಅವರನ್ನು ಪೊಲೀಸರು ಬೊಲೆರೋ ಜೀಪ್ ನಲ್ಲಿ ಬಿಗಿ ಭದ್ರತೆಯಲ್ಲಿ ಆಂಧ್ರ ಪ್ರದೇಶದ ಅನಂತಪುರ ಮೂಲಕ ಕರೆದೊಯ್ಯಲಾಗುತ್ತಿದ್ದು, ಬೆಳಗ್ಗೆ 10 ಗಂಟೆ ಸುಮಾರಿಗೆ ಬಳ್ಳಾರಿಗೆ ತಲುಪುವ ನಿರೀಕ್ಷೆಯಿದೆ. ದರ್ಶನ್ ಕಾಣಬಾರದು ಎನ್ನುವ ಕಾರಣಕ್ಕೆ ಬೊಲೆರೋ ಒಳಗೆ ಕರ್ಟನ್ ಹಾಕಲಾಗಿದೆ.
ಇತ್ತೀಚೆಗೆ ದರ್ಶನ್ ಅವರು ಜೈಲಿನಲ್ಲಿ ಸಿಗರೇಟ್ ಸೇದಿದ್ದ ಫೋಟೋ ವೈರಲ್ ಆಗಿತ್ತು. ಈ ಫೋಟೋದಿಂದ ಮುಜುಗರಕ್ಕೀಡಾಗಿದ್ದ ಸರ್ಕಾರ 12 ಅಧಿಕಾರಿಗಳನ್ನು ವಜಾ ಮಾಡಿದೆ. ರೇಣುಕಾ ಸ್ವಾಮಿ ಕೊಲೆ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದರು. ಅದರಂತೆ ಅವರನ್ನು ಶಿಫ್ಟ್ ಮಾಡಲಾಗುತ್ತಿದೆ.
ದಾಸನನ್ನು ನೋಡುವ ತವಕದಲ್ಲಿ ಅಭಿಮಾನಿಗಳು: ನಟ ದರ್ಶನ್ ಅವರನ್ನು ನಿನ್ನೆಯೇ ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತಿದೆ ಎಂಬ ಸುದ್ದಿ ದಟ್ಟವಾಗಿತ್ತು. ಇದರಿಂದ ತಮ್ಮ ನೆಚ್ಚಿನ ನಟನನ್ನು ನೋಡಲು ಅವಕಾಶ ಸಿಗಬಹುದೆಂಬ ನಿರೀಕ್ಷೆಯಿಂದ ಬಳ್ಳಾರಿ ಜೈಲಿನ ಬಳಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.
ಆದರೆ ಯಾವುದೇ ಕಾರಣಕ್ಕೂ ದರ್ಶನ್ ಅವರ ಮುಖ ಕಾಣಬಾರದು ಎಂದು ಅವರ ಮುಖವನ್ನು ಮುಚ್ಚಿ ಕರೆತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಸಂಬಂಧಿಸಿ ದರ್ಶನ್ ಅವರನ್ನು ಕಳೆದ ಜೂನ್ 11ರಂದು ಬೆಂಗಳೂರು ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದರು.
ನಟ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 2017 ರ ಕನ್ನಡ ಚಲನಚಿತ್ರ 'ಚೌಕ'ದ ಕೆಲವು ದೃಶ್ಯಗಳನ್ನು ಬಳ್ಳಾರಿ ಜೈಲಿನಲ್ಲಿ ಚಿತ್ರೀಕರಿಸಲಾಗಿತ್ತು.
Advertisement