ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧದ ಮಾನಹಾನಿ ಸುದ್ದಿ ಪ್ರಕಟಿಸದಂತೆ ಕೋರ್ಟ್ ನಿರ್ಬಂಧ

ಬಸವರಾಜ ಬೊಮ್ಮಾಯಿ ಹಾಗೂ ವಕೀಲ ಕೆ.ಎನ್.ಜಗದೀಶ್, ಅವರ ಮಾನಹಾನಿ ಆಗುವಂತಹ ಯಾವುದೇ ಸುದ್ದಿ ಅಥವಾ ವರದಿಗಳನ್ನು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಪ್ರಕಟಿಸುವುದಾಗಲೀ ಅಥವಾ ಬಿತ್ತರಿಸುವುದಾಗಲೀ ಮಾಡಬಾರದು.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Updated on

ಬೆಂಗಳೂರು: ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ಕೋರಿ ಮಾಜಿ ಸಿಎಂ, ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಬಸವರಾಜ​ ಬೊಮ್ಮಾಯಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದ್ದು, ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಪ್ರತಿಬಂಧಕಾಜ್ಞೆ ಹೊರಡಿಸಿದೆ.

ಬಸವರಾಜ ಬೊಮ್ಮಾಯಿ ಹಾಗೂ ವಕೀಲ ಕೆ.ಎನ್.ಜಗದೀಶ್, ಅವರ ಮಾನಹಾನಿ ಆಗುವಂತಹ ಯಾವುದೇ ಸುದ್ದಿ ಅಥವಾ ವರದಿಗಳನ್ನು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಪ್ರಕಟಿಸುವುದಾಗಲೀ ಅಥವಾ ಬಿತ್ತರಿಸುವುದಾಗಲೀ ಮಾಡಬಾರದು’ ಎಂದು ನಗರದ ಸೆಷನ್ಸ್ ನ್ಯಾಯಾಲಯ ತಾತ್ಕಾಲಿಕ ಆದೇಶ ನೀಡಿದೆ. ಬಸವರಾಜ ಬೊಮ್ಮಾಯಿ ಸಲ್ಲಿಸಿರುವ ಅಸಲು ದಾವೆಯ ಭಾಗವಾಗಿ ಸಲ್ಲಿಸಲಾಗಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ನಗರದ 8ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶೆ ವಾಣಿ ಎ.ಶೆಟ್ಟಿ ಅವರು ಬುಧವಾರ ಈ ಕುರಿತಂತೆ ಆದೇಶಿಸಿದ್ದಾರೆ.

ನಗರದ ಸಿಟಿ ಸಿವಿಲ್​ ಕೋರ್ಟ್​ನಲ್ಲಿ ಸಂಸದ ಬಸವರಾಜ್​ ಬೊಮ್ಮಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಾಣಿ.ಎ. ಶೆಟ್ಟಿ ಅವರಿದ್ದ ಏಕಸದಸ್ಯ ಪೀಠವು ಯಾವುದೇ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಿ ಆದೇಶ ಹೊರಡಿಸಿದೆ. ಪ್ರಕರಣದ ಪ್ರತಿವಾದಿಗಳು ಮತ್ತು ಅವರಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿಗಳು ದಾವೆಯ ಮುಂದಿನ ವಿಚಾರಣೆಯವರೆಗೆ ದೂರುದಾರ ಬಸವರಾಜ ಬೊಮ್ಮಾಯಿ ಅವರ ಮಾನಹಾನಿಯುಂಟು ಮಾಡುವ ಯಾವುದೇ ಸುದ್ದಿಗಳನ್ನು ಪ್ರಸಾರ, ಪ್ರಕಟ ಮತ್ತು ಹಂಚಿಕೆ ಮಾಡಬಾರದು. ಬೊಮ್ಮಾಯಿ ಅವರ ಮಾನಹಾನಿ ಆಗುವಂತಹ ಅಂಶಗಳನ್ನೊಳಗೊಂಡ ಪೋಸ್ಟ್‌ಗಳನ್ನು 24 ಗಂಟೆ ಒಳಗೆ ಅಳಿಸಿಹಾಕಬೇಕು ಎಂದು ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಮತ್ತು ಸಮನ್ಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಾಧೀಶರು ವಿಚಾರಣೆಯನ್ನು ಸೆಪ್ಟಂಬರ್ 09ಕ್ಕೆ ಮುಂದೂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com