
ಬಳ್ಳಾರಿ:ರಾಜಾತಿಥ್ಯ ಆರೋಪದ ಮೇಲೆ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್ ರನ್ನು ಬಳ್ಳಾರಿಗೆ ಕರೆತರುವಾಗ ಅವರ ಕೈಗೆ ಕೋಳ ತೊಡಿಸಲಿಲ್ಲ, ಕೂಲಿಂಗ್ ಗ್ಲಾಸ್, ಬೆಡ್ ಶೀಟ್, ಪ್ಯೂಮಾ ಬ್ರಾಂಡೆಡ್ ಟೀ ಶರ್ಟ್ ನೊಂದಿಗೆ ಎಂಟ್ರಿ ಕೊಟ್ಟಿದ್ದಾರೆ ಎಂದೆಲ್ಲ ಸುದ್ದಿಯಾಗಿತ್ತು. ಈ ಬಗ್ಗೆ ಅಲ್ಲಿನ ಸಿಬ್ಬಂದಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು.
ದರ್ಶನ್ ಕೈಗೆ ಕೋಳ ತೊಡಿಸದಿರುವ ಬಗ್ಗೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಸ್ಪಷ್ಟನೆ ನೀಡಿದ್ದಾರೆ. ಬಳ್ಳಾರಿಗೆ ಶಿಫ್ಟ್ ಮಾಡುವಾಗ ದರ್ಶನ್ ಕೈಯಲ್ಲಿ ಕೋಳ ಇರಲಿಲ್ಲ. ಆರೋಪಿ ದರ್ಶನ್ ಕೈ ನೋವಾಗಿದ್ದರಿಂದ ಬಟ್ಟೆ ಕಟ್ಟಿದ್ದರು. ದರ್ಶನ್ ಜೈಲಿಗೆ ಬಂದಾಗ ಕಡಗ, ದಾರ, ಚೈನ್ ಗಳನ್ನು ಬಿಚ್ಚಲಾಗಿದೆ. ದರ್ಶನ್ ಹಾಕಿಕೊಂಡಿದ್ದ ಕೂಲಿಂಗ್ ಗ್ಲಾಸ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಅದು ಎಷ್ಟು ಪವರ್ ಇದೆ ಎಂದು ವೈದ್ಯರು ತಪಾಸಣೆ ಮಾಡುತ್ತಿದ್ದಾರೆ ಎಂದರು.
ದರ್ಶನ್ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಅನಾರೋಗ್ಯ ವದಂತಿ ಸುಳ್ಳು, ಯಾವುದೇ ಸಮಸ್ಯೆಯಿಲ್ಲ. ವದಂತಿಗೆ ಕಿವಿಗೊಡಬೇಡಿ, ಎಲ್ಲರಿಗೂ ನೀಡುವ ಊಟವನ್ನೇ ದರ್ಶನ್ ಗೂ ಕೊಡಲಾಗುತ್ತಿದೆ. ಕೈಯಲ್ಲಿರುವ ಕಡಗ ಟೈಟ್ ಆಗಿದ್ದರಿಂದ ತೆಗೆಯಲಾಗಿದೆ.
ಚಿಕನ್, ಮಟನ್ ಊಟ: ಬಳ್ಳಾರಿ ಜೈಲಿನಲ್ಲಿ 2ನೇ ಮತ್ತು ನಾಲ್ಕನೇ ಶುಕ್ರವಾರ ಕೈದಿಗಳಿಗೆ ನಾನ್ ವೆಜ್ ಊಟ ನೀಡಲಾಗುತ್ತದೆ. ಅದರಂತೆ ಇಂದು ಬೆಳಿಗ್ಗೆ ಜೈಲಿನಲ್ಲಿ ತಿನ್ನಲು ಉಪ್ಪಿಟ್ಟು ನೀಡಿದ್ದು, ಉಪ್ಪಿಟ್ಟು ಸೇವಿಸಿದ್ದಾರೆ.ಎರಡನೇ ದಿನ ಊಟಕ್ಕೆ ದರ್ಶನ್ ಅವರಿಗೆ ಚಿಕನ್ ಊಟ ನೀಡಲಾಗಿದೆ. ಶುತ್ರವಾರ ಪ್ರತಿಯೊಬ್ಬ ಕೈದಿಗೂ 200 ಗ್ರಾಂ ಚಿಕನ್ ನೀಡಲಾಗುತ್ತದೆ. ಇಂದು ಮಧ್ಯಾಹ್ನದ ಊಟಕ್ಕೆ ದರ್ಶನ್ಗೆ ಚಿಕನ್ ಜೊತೆ ಚಪಾತಿ, ಮುದ್ದೆ, ಸಾಂಬಾರ್ ಮಜ್ಜಿಗೆ ಸಿಕ್ಕಿದೆ.
ಬದಲಿ ದಿನಗಳು ನಾನ್ ವೆಜ್ ಊಟ ದರ್ಶನ್ಗೆ ಸಿಗಲಿದೆ. ಒಂದು ಬಾರಿ ಚಿಕನ್, ಮತ್ತೊಂದಿ ಬಾರಿ ಮಟನ್ ಊಟ ಸಿಗಲಿದೆ. ಇಂದು ರಾತ್ರಿ ಅನ್ನ, ಸಾಂಬಾರ್, ಮಜ್ಜಿಗೆ ಊಟ ಸಿಗಲಿದೆ. ಹೊಸ ಸ್ಥಳವಾಗಿರುವ ಹಿನ್ನಲೆ ದರ್ಶನ್ ನಿನ್ನೆ ನಿದ್ದೆ ಸರಿಯಾಗಿ ಮಾಡಿಲ್ಲ ಎನ್ನಲಾಗಿದೆ.
ಎರಡು ಬ್ಯಾಗಿನ ತುಂಬ ಪುಸ್ತಕಗಳನ್ನು ದರ್ಶನ್ ಬಳ್ಳಾರಿ ಜೈಲಿಗೆ ಕೊಂಡು ಒಯ್ದಿದ್ದು, ಪುಸ್ತಕ ಓದುವುದರಲ್ಲಿ ನಿರತರಾಗಿದ್ದಾರಂತೆ. ಸುಮಾರು 20 ಹೊಸ ಪುಸ್ತಕಗಳನ್ನು ದರ್ಶನ್, ಜೈಲಿಗೆ ತಂದಿದ್ದಾರಂತೆ.
ಅಭಿಮಾನಿಗಳ ಪೂಜೆ, ಟ್ರೆಂಡ್ ಆದ ಕೈದಿ ನಂ.511
ದರ್ಶನ್ ಇರುವ ಕೇಂದ್ರ ಕಾರಾಗೃಹದ ಸಮೀಪದಲ್ಲಿರುವ ದುರ್ಗಾ ದೇವಿ ದೇವಸ್ಥಾನಕ್ಕೆ ದರ್ಶನ್ ಅಭಿಮಾನಿಗಳು ಭೇಟಿ ನೀಡಲಿದ್ದು, ದರ್ಶನ್ರ ಒಳಿತಾಗಿ ಇಂದು ತೆಂಗಿನ ಕಾಯಿ ಒಡೆದು ವಿಶೇಷ ಪೂಜೆ ಮಾಡಲಿದ್ದಾರೆ. ಈಗ ಬಳ್ಳಾರಿ ಜೈಲಿನಲ್ಲಿ ದರ್ಶನ್ಗೆ ಕೈದಿ ಸಂಖ್ಯೆ 511 ನೀಡಿದ್ದು, ಆ ಸಂಖ್ಯೆಯನ್ನು ಆಟೋಗಳ ಮೇಲೆ, ಬೈಕುಗಳ ಮೇಲೆ ಬರೆದುಕೊಳ್ಳುತ್ತಿದ್ದಾರೆ ಅಭಿಮಾನಿಗಳು.
Advertisement