ಗದಗ: ಗದಗ ಜಿಲ್ಲೆಯ ತೋಟಗಂಟಿ ಗ್ರಾಮದಿಂದ ಆಗಸ್ಟ್ 20 ರಂದು ನಾಪತ್ತೆಯಾಗಿದ್ದ ಮಹಿಳೆ ಮೂರು ದಿನಗಳ ನಂತರ ಗ್ರಾಮದ ಹೊರವಲಯದ ಪಾಳು ಬಾವಿಯಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ.
ಸದ್ಯ ಆಕೆ ಈಗ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೋಟಗಂಟಿ ಗ್ರಾಮದ ಪಾರ್ವತಿ ಕಲ್ಮಠ ಅವರು ಆ.20ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅಪರಿಚಿತ ಮಹಿಳೆ ಮನೆಗೆ ನುಗ್ಗಿ, ನನ್ನನ್ನು ಗ್ರಾಮದ ಪ್ರತ್ಯೇಕ ಸ್ಥಳಕ್ಕೆ ಎಳೆದೊಯ್ದಳು, ಅಲ್ಲಿ ಅವಳು ನನ್ನ ಮಂಗಳಸೂತ್ರ, ಬಳೆಗಳು ಮತ್ತು ಇತರ ಆಭರಣಗಳನ್ನು ಕಸಿದುಕೊಂಡು ಖಾಲಿ ಬಾವಿಗೆ ತಳ್ಳಿದಳು" ಎಂದು ಪಾರ್ವತಿ ಪೊಲೀಸರ ಬಳಿ ಮಾಹಿತಿ ನೀಡಿದ್ದಾರೆ.
ಮಹಿಳೆ ನನ್ನನ್ನು ಬಾವಿಗೆ ತಳ್ಳಿದ ನಂತರ ನಾನು ಪ್ರಜ್ಞೆ ಕಳೆದುಕೊಂಡೆ. ಮೂರನೇ ದಿನ ಮಳೆಯಲ್ಲಿ ನೆನೆದಾಗ ನನಗೆ ಪ್ರಜ್ಞೆ ಬಂತು. ನಾನು ಸುಮಾರು ಎರಡು ಗಂಟೆಗಳ ಕಾಲ ಸಹಾಯಕ್ಕಾಗಿ ಕಿರುಚಿದೆ. ಕೊನೆಗೆ ನನ್ನ ಅಳಲನ್ನು ಕೇಳಿದ ಕೆಲವರು ನನ್ನನ್ನು ಬಾವಿಯಿಂದ ಹೊರತೆಗೆದು ರಕ್ಷಿಸಿದರು ಎಂದು ಆಕೆ ಹೇಳಿದ್ದಾರೆ. ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಈ ಹಿಂದೆಯೂ ಇಂತಹ ಹಲವು ಘಟನೆಗಳು ಗ್ರಾಮದಲ್ಲಿ ನಡೆದಿವೆ ಎಂದು ಕೆಲವು ಗ್ರಾಮಸ್ಥರು ಹೇಳಿದ್ದಾರೆ. ಇಂತಹ ಘಟನೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ಗಾಗಿ ತಿಳಿಸಿದ್ದಾರೆ.
ಪಾರ್ವತಿ ಮತ್ತು ಆಕೆಯ ಪತಿ ಆರು ತಿಂಗಳ ಹಿಂದೆ ತೋಟಗಂಟಿ ಗ್ರಾಮಕ್ಕೆ ಬಂದಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಂದಿನಿಂದ ಅವರು ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಬಾವಿಯ ಬಳಿ ಕುರಿ ಮತ್ತು ಮೇಕೆಗಳನ್ನು ಮೇಯಿಸುತ್ತಿದ್ದ ಕೆಲವು ಹುಡುಗರು ಸಹಾಯಕ್ಕಾಗಿ ಪಾರ್ವತಿಯ ಕಿರುಚಾಟವನ್ನು ಕೇಳಿದ ನಂತರ ಅವರ ರಕ್ಷಣೆಗೆ ಧಾವಿಸಿದರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಪಾರ್ವತಿ ದುರ್ಬಲಳಾಗಿದ್ದು, ಬಾವಿಯಿಂದ ಹೊರತೆಗೆದಾಗ ಮಾತನಾಡಲೂ ಸಾಧ್ಯವಾಗಲಿಲ್ಲ. ಪಾರ್ವತಿ ಸಂಪೂರ್ಣ ಚೇತರಿಸಿಕೊಂಡ ನಂತರ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಶೀಘ್ರವಾಗಿ ಆಕೆ ಚೇತರಿಸಿಕೊಳ್ಳಲಿದ್ದಾರೆ ಎಂದು ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.
Advertisement