ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಿದೆ. ಸಿಎಂ ಸಿದ್ದರಾಮಯ್ಯ ಪರ ವಕೀಲ ರವಿವರ್ಮ ಕುಮಾರ್ ವಾದ ಮಂಡಿಸಿದರೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ರಾಜ್ಯಪಾಲರ ಪರವಾಗಿ ವಾದಿಸಿದರು. ಒಟ್ಟಾರೆಯಾಗಿ ಬೆಳಗ್ಗೆಯಿಂದ ಸುದೀರ್ಘ ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್, ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ. ವಾದ-ವಿವಾದದ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿಗಳು ಬಹಳ ಜನ ವಾದ ಮಂಡನೆ ಮಾಡಿದ್ದೀರಿ. ಆದರೆ ಇದರಲ್ಲಿ ಸಿಎಂ ಪಾತ್ರ ಏನು ಎಂದು ಯಾರು ಹೇಳುತ್ತಿಲ್ಲ. ಸಿಎಂ ಪಾತ್ರದ ಬಗ್ಗೆ ನಿಮ್ಮ ಉತ್ತರವೇನು ಎಂದು ದೂರುದಾರರ ಪರ ವಕೀಲರಿಗೆ ಪ್ರಶ್ನಿಸಿದರು. ಅಲ್ಲದೆ ರಾಜ್ಯಪಾಲರ ಅನುಮತಿ ಬೇಕೋ ಬೇಡವೋ ನಿರ್ಧರಿಸಬೇಕು. ಅನುಮತಿ ನೀಡಿದ್ದು ಸರಿಯೋ ಇಲ್ಲವೋ ನಿರ್ಧರಿಸಬೇಕು. ಹೀಗಾಗಿ ಮಧ್ಯಂತರ ಆದೇಶ ಮುಂದೂಡಲಾಗಿದೆ ಎಂದು ನ್ಯಾ.ಎಂ.ನಾಗಪ್ರಸನ್ನ ಹೇಳಿದ್ದಾರೆ.
ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ನಡೆಯನ್ನು ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳು, ಶಾಸಕರು ಮತ್ತು ಸಂಸದರು ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದರು. ನಂತರ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ರಾಜಭವನ ಚಲೋ ನಡೆಸಿ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ಹಾಗೂ ಶಶಿಕಲಾ ಜೊಲ್ಲೆ ವಿರುದ್ಧವೂ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದರು. ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ರಾಜಭವನ ರಾಜಕೀಯ ಪಕ್ಷದ ಕಚೇರಿಯಾಗಬಾರದು ಎಂಬ ಉದ್ದೇಶದಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ನಾವು ರಾಜಭವನ ಚಲೋ ಹಮ್ಮಿಕೊಂಡಿರುವುದು ಸಿಎಂ ಸಿದ್ದರಾಮಯ್ಯ ಪರವಾಗಿ ಅಲ್ಲ. ಈ ವಿಷಯ ನ್ಯಾಯಾಲಯದಲ್ಲಿದೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದರು. ಈ ಮಧ್ಯೆ, ಬಿಜೆಪಿ ಎಂಎಲ್ಸಿ ರವಿಕುಮಾರ್ ಅವರು, MUDA ಸಭೆ ಆಡಿಯೋ ದಾಖಲೆ ಬಿಡುಗಡೆ ಮಾಡಿದ್ದು 2020ರ ಮುಡಾ ಸಭೆಯಲ್ಲಿ ಸಿದ್ದರಾಮಯ್ಯ ಪತ್ನಿಗೆ ಸೈಟ್ ನೀಡುವ ಬಗ್ಗೆ ನಿರ್ಣಯವೇ ಆಗಿಲ್ಲ ಎಂದು ಹೇಳಿದ್ದಾರೆ.
ಶತ್ರು ರಾಷ್ಟ್ರಗಳಿಗೆ INS ಕದಂಬ ನೌಕಾ ನೆಲೆಯ ಚಿತ್ರಗಳು ಮತ್ತು ಮಹತ್ವದ ಮಾಹಿತಿಗಳನ್ನು ರವಾನಿಸಿದ ಆರೋಪದ ಮೇಲೆ NIA ವಶಕ್ಕೆ ಪಡೆದಿದ್ದ ಮೂವರು ವ್ಯಕ್ತಿಗಳು ಪಾಕಿಸ್ತಾನದ ಮಹಿಳಾ ಏಜೆಂಟ್ ನಿಂದ ಹನಿಟ್ರ್ಯಾಪ್ ಗೆ ಸಿಲುಕಿದ್ದ ಮಾಹಿತಿ ಸಿಕ್ಕಿದೆ. ತನ್ನನ್ನು ನೌಕಾ ಅಧಿಕಾರಿ ಎಂದು ಪರಿಚಯಿಸಿಕೊಂಡ ಪಾಕಿಸ್ತಾನಿ ಏಜೆಂಟ್, ಮೂವರಿಂದ ನೌಕಾ ನೆಲೆಯ ಪ್ರಮುಖ ಮಾಹಿತಿ ಮತ್ತು ಚಿತ್ರಗಳನ್ನು ಪಡೆದಿದ್ದಳು ಎಂದು ತನಿಖೆಯಿಂದ ಬಹಿರಂಗಗೊಂಡಿದೆ. ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಮೂವರಿಗೂ ಈಕೆ ಹತ್ತಿರವಾಗಿದ್ದಳು. ಆರೋಪಿಗಳಾದ ಮುದ್ಗಾದ ವೇಥನ್ ತಾಂಡೇಲ್, ಥೋಡೂರಿನ ಸುನೀಲ್ ಮತ್ತು ಹಳವಳ್ಳಿಯ ಅಕ್ಷಯ್ ನಾಯ್ಕ್ ಆರೋಪಿಗಳಾಗಿದ್ದಾರೆ. ಸುನಿಲ್ ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟು ಗೋವಾದಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ನೌಕಾನೆಲೆಯಲ್ಲಿ ಕೆಲಸ ಮಾಡುವ ತನ್ನ ಸ್ನೇಹಿತರು, ಸಂಬಂಧಿಕರಿಂದ ಮಾಹಿತಿ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ತೂಗುದೀಪ್ ಅವರ ಗೆಳತಿ ಪವಿತ್ರಾ ಗೌಡ ಹಾಗೂ ಅನುಕುಮಾರ್ ಅವರ ಜಾಮೀನು ಅರ್ಜಿಯನ್ನು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಇಂದು ವಜಾಗೊಳಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿಯಾಗಿರುವ ಪವಿತ್ರಾ ಗೌಡ ಹಾಗೂ ಮತ್ತೊಬ್ಬ ಆರೋಪಿ ಅನುಕುಮಾರ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು.
ತಮಿಳುನಾಡಿನ ಹಿಜ್ಬ್ ಉಲ್ ತಹ್ರೀರ್ ಭಯೋತ್ಪಾದಕ ಸಂಘಟನೆಯ ಶಂಕಿತ ಉಗ್ರನನ್ನು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ NIA ಅಧಿಕಾರಿಗಳು ಬಂಧಿಸಿದ್ದಾರೆ. ಅಜೀಜ್ ಅಹಮದ್ ಅಲಿಯಾಸ್ ಜಲೀಲ್ ಅಜೀಜ್ ಅಹ್ಮದ್ ಬಂಧಿತ ಶಂಕಿತ ಉಗ್ರನಾಗಿದ್ದು ವಿದೇಶಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಯಿತು ಎಂದು ಎನ್‌ಐಎ ತಿಳಿಸಿದೆ. ಉಗ್ರಗಾಮಿ ಹಾಗೂ ಇಸ್ಲಾಂ ಮೂಲಭೂತ ಸಿದ್ಧಾಂತದಿಂದ ಪ್ರಭಾವಿತವಾಗಿ ಜಗತ್ತಿನ ಇಸ್ಲಾಮೀಕರಣ ಮತ್ತು ಇಸ್ಲಾಮಿಕ್ ಕಾನೂನು ಸ್ಥಾಪಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದ ಆರೋಪದಲ್ಲಿ ಆರು ಮಂದಿ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸಿಕೊಂಡಿತ್ತು.
Advertisement