ಬಾಣಂತಿಯರ ಸಾವು: ರಿಂಗರ್ ಲ್ಯಾಕ್ಟೇಟ್ ಕಂಪನಿ ವಿರುದ್ಧ ತನಿಖೆ ನಡೆಸುವಂತೆ DCGIಗೆ ರಾಜ್ಯ ಸರ್ಕಾರ ಮನವಿ

ಮೃತ ಬಾಣಂತಿಯರಿಗೆ ಬಳಸಿದ ಐವಿ ಫ್ಲೂಯಿಡ್​​ ಸ್ಯಾಂಪಲ್ಸ್​ಗಳ ವರದಿ ಬಂದಿದ್ದು, ಅದರಲ್ಲಿ ಫಂಗಸ್ ಸೇರಿದ್ದಂತೆ ಬ್ಯಾಕ್ಟೀರಿಯಾ ಅಂಶ ಕಂಡುಬಂದಿದೆ.
Bellary Hospital
ಬಳ್ಳಾರಿ ಆಸ್ಪತ್ರೆ
Updated on

ಬೆಂಗಳೂರು: ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮೂಲದ ಐವಿ ರಿಂಗರ್ ಲ್ಯಾಕ್ಟೇಟ್ ತಯಾರಕ ಕಂಪನಿ ವಿರುದ್ಧ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಮಂಗಳವಾರ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ)ಗೆ ಮನವಿ ಮಾಡಿದೆ.

ಮೃತ ಬಾಣಂತಿಯರಿಗೆ ಬಳಸಿದ ಐವಿ ಫ್ಲೂಯಿಡ್​​ ಸ್ಯಾಂಪಲ್ಸ್​ಗಳ ವರದಿ ಬಂದಿದ್ದು, ಅದರಲ್ಲಿ ಫಂಗಸ್ ಸೇರಿದ್ದಂತೆ ಬ್ಯಾಕ್ಟೀರಿಯಾ ಅಂಶ ಕಂಡುಬಂದಿದೆ. ರಾಜ್ಯದ ಐವಿ ಫ್ಲೂಯಿಡ್ ರಿಪೋರ್ಟ್​ನಲ್ಲಿ ಅಸುರಕ್ಷಿತ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಅವರು ಡಿಸಿಜಿಐಗೆ ಪತ್ರ ಬರೆದಿದ್ದಾರೆ.

ಪಶ್ಚಿಮ ಬಂಗಾಳದ ಈ ಕಂಪನಿ ಬರೋಬ್ಬರಿ 192 ಬ್ಯಾಚ್​ಗಳಲ್ಲಿ ಔಷಧಿ ಕಳಿಸಿತ್ತು. ಬಳಕೆ ಮಾಡುವುದಕ್ಕೆ ಶುರು ಮಾಡಿದ ಆರಂಭದಲ್ಲೇ ಐವಿ ರಿಂಗರ್ ಲ್ಯಾಕ್ಟೇಟ್ ಬಗ್ಗೆ ಶಂಕೆ ಎದ್ದಿತ್ತು. ಬಳಿಕ 22 ಬ್ಯಾಚ್​ಗಳು ಉತ್ತಮ ಗುಣಮಟ್ಟ ಹೊಂದಿಲ್ಲವೆಂಬ ವರದಿ ಹೊರಬಿದ್ದಿತ್ತು. ಖುದ್ದು ರಾಜ್ಯದ ಡ್ರಗ್ ಕಂಟ್ರೋಲ್ ಐವಿ ರಿಂಗರ್ ಲ್ಯಾಕ್ಟೇಟ್ ಗುಣಮಟ್ಟ ಉತ್ತಮವಾಗಿಲ್ಲ ಅನ್ನೋ ವರದಿ ನೀಡಿತ್ತು. ಹೀಗಾಗಿ ಪಶ್ಚಿಮ ಬಂಗಾಳದಿಂದ ಬಂದಿದ್ದ ಅಷ್ಟು ಬ್ಯಾಚ್​ಗಳಿಗೆ ಬ್ರೇಕ್ ಹಾಕಿ, ಬಳಿಕ ಬ್ಲಾಕ್ ಲಿಸ್ಟ್​ಗೆ ಸೇರಿಸಿತ್ತು. ಆದರೆ ಕೇಂದ್ರ ಡ್ರಗ್ ಲ್ಯಾಬ್​ನಲ್ಲಿ ಇದೇ ಔಷಧಿಯ 22 ಬ್ಯಾಚ್​ಗಳು ಪಾಸ್ ಆಗಿವೆ ಎನ್ನಲಾಗಿದೆ.

Bellary Hospital
ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು: ರಾಜ್ಯ ಔಷಧ ನಿಯಂತ್ರಕ ಅಮಾನತು, ತನಿಖೆಗೆ ಸಮಿತಿ ರಚನೆ!

ಈ ಹಿನ್ನೆಲೆಯಲ್ಲಿ ಇಂದು DCGIಗೆ ಪತ್ರ ಬರೆದಿರುವ ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರು, ಪಶ್ಚಿಮ ಬಂಗಾಳ ಮೂಲದ ಔಷಧೀಯ ಕಂಪನಿ ಪಶ್ಚಿಮ ಬಂಗಾ ಫಾರ್ಮಾಸ್ಯುಟಿಕಲ್ಸ್‌ನಿಂದ ಕರ್ನಾಟಕ ರಾಜ್ಯಕ್ಕೆ ಐವಿ ರಿಂಗರ್ ಲ್ಯಾಕ್ಟೇಟ್ ನ ಹಲವಾರು ಬ್ಯಾಚ್‌ಗಳನ್ನು ಸರಬರಾಜು ಮಾಡಲಾಗಿದೆ. ಇದನ್ನು ಜಿಲ್ಲಾ ಔಷಧ ಗೋದಾಮುಗಳ ಮೂಲಕ ಸರ್ಕಾರಿ ಆಸ್ಪತ್ರೆಗಳಲ್ಲಿ ವಿತರಿಸಲಾಗಿದೆ.

ರಿಂಗರ್ ಲ್ಯಾಕ್ಟೇಟ್ ತಯಾರಕರು ಪಶ್ಚಿಮ ಬಂಗಾಳದ ಡ್ರಗ್ಸ್ ಕಂಟ್ರೋಲರ್/ಲೈಸೆನ್ಸಿಂಗ್ ಪ್ರಾಧಿಕಾರದಿಂದ ಪರವಾನಗಿ ಪಡೆದಿದ್ದಾರೆ ಮತ್ತು ಇದಕ್ಕೆ DCGI ಅನುಮೋದಿಸಿದೆ ಎಂದು ಪತ್ರದಲ್ಲಿ ಒತ್ತಿಹೇಳಿದ್ದಾರೆ.

ತಾವು ಒದಗಿಸಿದ ಮಾಹಿತಿಯೊಂದಿಗೆ ಆದ್ಯತೆಯ ಆಧಾರದ ಮೇಲೆ ತಯಾರಕರು ವಿರುದ್ಧ ತನಿಖೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹರ್ಷಗುಪ್ತ ಅವರು ಮನವಿ ಮಾಡಿದ್ದಾರೆ.

ಹೆಚ್ಚುವರಿಯಾಗಿ, ನೀವು ಪಶ್ಚಿಮ ಬಂಗಾಳದ ಡ್ರಗ್ಸ್ ಕಂಟ್ರೋಲರ್ ಮತ್ತು ನಿಮ್ಮ ಅಧೀನ ವಲಯದ ಅಧಿಕಾರಿಗಳಿಗೆ ಈ ರಾಜ್ಯದ ಅಧಿಕಾರಿಗಳು ಉತ್ಪಾದನಾ ಘಟಕದ ವಿರುದ್ಧ ತನಿಖೆಗೆ ಸಹಕರಿಸಲು ನಿರ್ದೇಶಿಸಬಹುದು” ಎಂದು ಅವರು ಹೇಳಿದ್ದಾರೆ.

ಬಾಣಂತಿಯರ ಸಾವಿನ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಡ್ರಗ್ಸ್ ನಿಯಂತ್ರಕರನ್ನು ಅಮಾನತುಗೊಳಿಸಿ, ಪಶ್ಚಿಮ ಬಂಗಾ ಫಾರ್ಮಾಸ್ಯುಟಿಕಲ್ಸ್ ಅನ್ನು ಕಪ್ಪು ಪಟ್ಟಿಗೆ ಸೇರಿಸಲು ಮತ್ತು ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಶನಿವಾರ ಆದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com