ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ಹಲವು ಅಕ್ರಮಗಳು ನಡೆದಿರುವ ಬಗ್ಗೆ ಪುರಾವೆಗಳು ಸಿಕ್ಕಿವೆ ಎಂದು ಇಡಿ ತಿಳಿಸಿದೆ. ಪ್ರಕರಣ ಸಂಬಂಧ ಲೋಕಾಯುಕ್ತ ಇಲಾಖೆಗೆ ಜಾರಿ ನಿರ್ದೇಶನಾಲಯ ಪತ್ರ ಬರೆದಿದ್ದು, ಮುಡಾ ಒಟ್ಟು 1,095 ಸೈಟ್‌ಗಳನ್ನು ಬೇನಾಮಿ ಮತ್ತು ಇತರ ವಹಿವಾಟುಗಳಲ್ಲಿ 'ಅಕ್ರಮವಾಗಿ' ಮಂಜೂರು ಮಾಡಿರುವುದು ತನ್ನ ತನಿಖೆಯಲ್ಲಿ ಕಂಡುಬಂದಿದೆ ಎಂದು ಹೇಳಿದೆ. ತನಿಖೆಯ ವೇಳೆ, ಭೂಪರಿವರ್ತನೆಯಲ್ಲಿ ‘ಕಾನೂನುಬದ್ಧ ಮಾರ್ಗಸೂಚಿಗಳ ಉಲ್ಲಂಘನೆ’, ಕಚೇರಿಯ ಕಾರ್ಯವಿಧಾನಗಳ ಉಲ್ಲಂಘನೆ, ಹಾಗೂ ಸಹಿಗಳ ‘ಫೋರ್ಜರಿ’ಗೆ ಸೆಬಂಧಪಟ್ಟ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಜಾರಿ ನಿರ್ದೇಶನಾಲಯ ಲೋಕಾಯುಕ್ತಕ್ಕೆ ಪತ್ರ ಬರೆದಿರುವುದನ್ನು ರಾಜಕೀಯ ಪ್ರೇರಿತ, ಪ್ರಭಾವ ಬೀರುವ ಉದ್ದೇಶವಾಗಿದೆ. ಪ್ರಕರಣದ ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಯಾವುದೇ ಅಧಿಕಾರವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಮಹಿಳೆಯ ಆತ್ಮಹತ್ಯೆ ಕೇಸ್ ಸಂಬಂಧ ಸಿಐಡಿ ಎಸ್ ಪಿ ಕನಕ ಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಆತ್ಮಹತ್ಯೆಗೆ ಶರಣಾಗಿದ್ದ ಮಹಿಳೆ ಜೀವಾ ತಮಗೆ ಎಸ್ ಪಿ ಕನಕಲಕ್ಷ್ಮಿ ಕಿರುಕುಳ ನೀಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ಕಾನೂನುಬದ್ಧವಾಗಿಲ್ಲ ಎಂದು ಕನಕಲಕ್ಷ್ಮಿ ಹೈಕೋರ್ಟ್ ನಲ್ಲಿ ವಾದಿಸಿದ್ದರು. ಇದೇ ವೇಳೆ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ನಿರ್ದೇಶನ ಕೋರಿ ಬೆಂಗಳೂರಿನ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್ ವಜಾಗೊಳಿಸಿದ್ದು, ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲು ಸೂಚನೆ ನೀಡಿದೆ.
5ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಖಾಸಗಿ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ಬಂದ್ ಯಶಸ್ವಿಯಾಗಿದೆ. ಯಡ್ರಾಮಿ ಪೊಲೀಸರು ಆರೋಪಿ ಖಾಜಾಸಾಬ್ ನನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಶಾಲೆಗೆ ನೀಡಿರುವ ಅನುಮತಿಯನ್ನು (ಸರ್ಕಾರಿ ಮಾನ್ಯತೆ) ರದ್ದುಪಡಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ಬಂದ್ ಗೆ ವಿವಿಧ ಸ್ಥಳೀಯ ಸಂಘಟನೆಗಳು ಬೆಂಬಲ ಸೂಚಿಸಿದ್ದವು.
ರಾಜ್ಯ ಬಿಜೆಪಿಯಲ್ಲಿನ ಭಿನ್ನಮತಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ತಿಳಿಸಲು ಆಗಮಿಸುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ದೆಹಲಿಗೆ ತೆರಳಿದ್ದಾರೆ. ವಕ್ಪ್ ವಿಚಾರವಾಗಿ ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರಗೆ ಸೆಡ್ಡು ಹೊಡೆದಿರುವ ಯತ್ನಾಳ್ ಬಣ, ಪ್ರತ್ಯೇಕ ಸಭೆಗಳನ್ನು ಮುಂದುವರೆಸಿದೆ. ಯತ್ನಾಳ್ ರನ್ನು ಉಚ್ಚಾಟನೆ ಮಾಡುವಂತೆ ಬಿಜೆಪಿಯೊಳಗಿನ ಮತ್ತೊಂದು ಬಣ ಆಗ್ರಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆರ್ ಅಶೋಕ್ ದೆಹಲಿ ಭೇಟಿ ಮಹತ್ವ ಪಡೆದುಕೊಂಡಿದೆ. ಇನ್ನು ನೊಟೀಸ್ ನೀಡಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಶಿಸ್ತು ಸಮಿತಿಯ ಎದುರು ಹಾಜರಾದ ಯತ್ನಾಳ್, ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ. ಕುಟುಂಬದ ಕಪಿ ಮುಷ್ಟಿಯಿಂದ ಪಕ್ಷ ಹೊರ ಬರಬೇಕು, ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪತ್ರದಲ್ಲಿ ಬರೆದಿದ್ದೇನೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ದೆಹಲಿಯಲ್ಲಿ ಬಿಜೆಪಿಯ ಯತ್ನಾಳ್ ನೇತೃತ್ವದ ನಿಯೋಗ ವಕ್ಫ್ ಸಂಬಂಧ ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರನ್ನು ಭೇಟಿಯಾಗಿ, ವಕ್ಫ್ ಸಂಬಂಧಿಸಿದ ವರದಿ ಸಲ್ಲಿಸಿದೆ.
ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ಅಧಿಕಾರ ಹಂಚಿಕೆ ಕುರಿತು ಚರ್ಚೆ ಆರಂಭವಾಗಿದೆ. ಅಧಿಕಾರ ಹಂಚಿಕೆಯ ವಿಷಯವಾಗಿ ಮತ್ತೆ ಮಾತನಾಡಿರುವ ಸಿದ್ದರಾಮಯ್ಯ, ನಮ್ಮ ಮಧ್ಯೆ ಯಾವುದೇ ಒಪ್ಪಂದ ಆಗಿಲ್ಲ. ಹೈಕಮಾಂಡ್ ತೀರ್ಮಾನದಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಮಾತಾನಾಡಿದ್ದ ಡಿಕೆ ಶಿವಕುಮಾರ್ ನಮ್ಮ ನಡುವೆ ಒಪ್ಪಂದವಾಗಿರುವುದು ನಿಜ. ಸಮಯ ಬಂದಾಗ ಆ ಬಗ್ಗೆ ಮಾತನಾಡುವೆ ಎಂದು ಹೇಳಿದ್ದರು. ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ, ಸಿಎಂ ಹೇಳಿದ ಮೇಲೆ ಮುಗಿಯಿತು. ಆ ಬಗ್ಗೆ ಎರಡು ಮಾತಿಲ್ಲ, ಚರ್ಚೆಯಿಲ್ಲ, ಅವರು ಹೇಳಿದ್ದೇ ಫೈನಲ್ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
Advertisement