ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ತನಿಖೆಗೆ ಅನುಮತಿಸಿದ ರಾಜ್ಯಪಾಲರ ಆದೇಶ ಎತ್ತಿ ಹಿಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ಇಂದು ನಡೆಯಿತು. ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ರಾಜ್ಯ ಸರ್ಕಾರ ಮತ್ತು ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಜನವರಿ 25, 2025ಕ್ಕೆ ಮುಂದೂಡಿದೆ.
ಹಾಸನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಜನಕಲ್ಯಾಣ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಹಸ್ರಾರು ಮಂದಿ ನೆರೆದಿದ್ದರು. ನಗರದ ಅರಸಿಕೆರೆ ರಸ್ತೆಯಲ್ಲಿರುವ ಎಸ್.ಎಂ. ಕೃಷ್ಣ ಬಡಾವಣೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರ ಗರ್ವಭಂಗ ಮಾಡುತ್ತೇವೆ ಎನ್ನುತ್ತಿದ್ದಾರೆ, ಗರ್ವ ಭಂಗ ಮಾಡಲು ಬಿಡುತ್ತೀರಾ? ಎಂದು ಜನತೆಯನ್ನು ಸಿಎಂ ಪ್ರಶ್ನಿಸಿದ್ದಾರೆ. ಬಿಆರ್ ಪಾಟೀಲ್, ಸತೀಶ್ ಜಾರಕಿಹೊಳಿ, ನಾನು ಸೇರಿ ಜೆಡಿಎಸ್ ಕಟ್ಟಿದ್ದೆವು, ದೇವೇಗೌಡ ಸಿಎಂ ಆಗಿದ್ದು ನಮ್ಮಿಂದ ಎಂದು ಹೇಳಿದರು. ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡಿದ್ದಕ್ಕಾಗಿ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದರು. ದೇವೇಗೌಡ ಕುಮಾರಸ್ವಾಮಿ ಸೇರಿ ಯಡಿಯೂರಪ್ಪಗೆ ಅಧಿಕಾರ ನೀಡದೇ ಮೋಸ ಮಾಡಿದರು. ಸ್ಥಿರ ಸರ್ಕಾರ ಕೊಡಲು ಸಾಧ್ಯವಾಗದವರಿಗೆ ಅಧಿಕಾರ ಕೊಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ನಾವು ಅಧಿಕಾರದಲ್ಲಿರುವವರೆಗೂ ಗ್ಯಾರೆಂಟಿ ಮುಂದುವರೆಸುತ್ತೆವೆ, ಮುಂದಿನ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ 7ಕ್ಕೆ 7 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು. ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಈ ಬಂಡೆ ಸದಾ ಸಿದ್ದರಾಮಯ್ಯ ಜೊತೆ ಇರುತ್ತದೆ. ಜಿಲ್ಲೆಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶಗೊಂಡು, ನೊಂದ ತಾಯಂದಿರಿಗೆ ಧೈರ್ಯ ತುಂಬಲು ಜಿಲ್ಲೆಯ ಜನ ಸಂಸದ ಶ್ರೇಯಸ್ ಪಟೇಲ್ ಗೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತ ಹೇಳಿಕೆಗಳಿಗೆ ಕಾಂಗ್ರೆಸ್ ಪಕ್ಷದಲ್ಲೇ ಅಸಮಾಧಾನ ಭುಗಿಲೆದ್ದಿದೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್ ಈ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಒಪ್ಪಂದ ಆಗಿರುವ ವಿಚಾರ ನನಗೆ ಗೊತ್ತಿಲ್ಲ. ಒಪ್ಪಂದ ಆಗಿದೆ ಎನ್ನುವುದಾದರೆ ನಾವೆಲ್ಲ ಯಾಕಿರಬೇಕು?. ಅವರಿಬ್ಬರೇ ರಾಜಕಾರಣ ನಡೆಸಲಿ. ಬೇರೆಯವರು ಇರುವುದೇ ಬೇಡವೇ?. ಆ ರೀತಿ ಒಪ್ಪಂದ ಆಗಿರಲು ಸಾಧ್ಯವಿಲ್ಲ, ಒಪ್ಪಂದ ಎಲ್ಲ ನಮಗೆ ಗೊತ್ತಿಲ್ಲ ಎಂದು ಹೇಳಿದರು.
ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಸಂಬಂಧ ಎನ್ಐಎ ಇಂದು ಬೆಳಗ್ಗೆ ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಸುಂಟಿಕೊಪ್ಪ ಸೇರಿದಂತೆ 16 ಸ್ಥಳಗಳಲ್ಲಿ ದಾಳಿ ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಎರಡೂವರೆ ವರ್ಷಗಳ ಹಿಂದೆ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗೆ ಕೊಡಗಿನ ಸಂಪರ್ಕವಿದ್ದು, ಹಾಗಾಗಿ ಇಂತಹ ದಾಳಿಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.
ಕರ್ತವ್ಯ ಲೋಪದ ಆರೋಪದ ಮೇಲೆ ರಾಮಮೂರ್ತಿನಗರ ಪೊಲೀಸ್ ಠಾಣೆಯ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್, ಒಬ್ಬ ಸಬ್ ಇನ್ಸ್‌ಪೆಕ್ಟರ್ ಮತ್ತು ಇತರ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. 6 ಮಂದಿ ಪೊಲೀಸರ ಭ್ರಷ್ಟ ಕೃತ್ಯಗಳನ್ನು ಆರೋಪಿಸಿ ಅನಾಮಧೇಯ ಪತ್ರವೊಂದು ವೈರಲ್ ಆಗಿತ್ತು. ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ನಗರ ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಕಮಿಷನರ್ ಶ್ರೇಣಿಯ ಅಧಿಕಾರಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು. ಪೊಲೀಸರ ಮೇಲೆ ಹಲ್ಲೆ ನಡೆಸಿ ಮಾದಕ ದ್ರವ್ಯ ದಂಧೆಕೋರರಿಂದ ಹಣ ವಸೂಲಿ ಮಾಡಿದ್ದ ಆರೋಪಿಯನ್ನು ಬಿಟ್ಟ ಆರೋಪದಲ್ಲಿ ಆರು ಪೊಲೀಸರು ತಪ್ಪಿತಸ್ಥರೆಂದು ಸಾಬೀತಾಗಿದ್ದು ಅವರನ್ನು ಅಮಾನತುಗೊಳಿಸಲಾಗಿದೆ.
ಸಿದ್ದಗಂಗಾ ಮಠದ ಡಾ. ಶಿವಕುಮಾರಸ್ವಾಮಿ ಪುತ್ಥಳಿ ವಿರೂಪಗೊಳಿಸಿದ್ದ ಆರೋಪಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ರಾಜ್ ಶಿವು ಬಂಧಿತನಾಗಿದ್ದು, ಈತ ಗಿರಿನಗರದ ಬಳಿಯ ವೀರಭದ್ರನಗರ ಬಸ್ ನಿಲ್ದಾಣದ ಬಳಿ ನ.30 ರಂದು ಪುತ್ಥಳಿಗೆ ಹಾನಿ ಮಾಡಿದ್ದ. ಶಿವಕುಮಾರ ಸ್ವಾಮೀಜಿಗಳ ಮೂರ್ತಿ ಒಡೆಯಲು ಕನಸನಲ್ಲಿ ಏಸು ಹೇಳಿದ್ದರು. ಈ ಕಾರಣಕ್ಕಾಗಿ ಮೂರ್ತಿ ವಿರೂಪಗೊಳಿಸಿದ್ದೇನೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
Advertisement