News highlights 09-12-24 | ಬೆಳಗಾವಿ ಕೇಂದ್ರಾಡಳಿತ ಪ್ರದೇಶ?; ಅಧಿವೇಶನದಲ್ಲಿ ಪ್ರತಿಧ್ವನಿಸಿದ ವಕ್ಫ್ ವಿವಾದ; ದರ್ಶನ್‌ಗೆ ಬಿಗ್ ರಿಲೀಫ್!

News highlights 09-12-24 | ಬೆಳಗಾವಿ ಕೇಂದ್ರಾಡಳಿತ ಪ್ರದೇಶ?; ಅಧಿವೇಶನದಲ್ಲಿ ಪ್ರತಿಧ್ವನಿಸಿದ ವಕ್ಫ್ ವಿವಾದ; ದರ್ಶನ್‌ಗೆ ಬಿಗ್ ರಿಲೀಫ್!

1. ಬೆಳಗಾವಿ ಅಧಿವೇಶನ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ವಕ್ಫ್ ವಿವಾದ BJP-Congress ವಾಗ್ಯುದ್ದ

ಕುಂದಾನಗರಿ ಬೆಳಗಾವಿಯಲ್ಲಿ ನಡೆಯುತ್ತಿರುವ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದ ಮೊದಲ ದಿನವೇ ವಕ್ಪ್ ವಿವಾದ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ, ಪ್ರತಿಪಕ್ಷ ಬಿಜೆಪಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ಮತ್ತು ವಾಗ್ಯುದ್ದಕ್ಕೆ ಕಾರಣವಾಯಿತು. ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರಶ್ನೋತ್ತರ ಅವಧಿ ಬದಿಗೊತ್ತಿ, ವಕ್ಫ್ ವಿವಾದ ಕುರಿತು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು. ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಸಭೆ ಉಪ ಪ್ರತಿಪಕ್ಷ ನಾಯಕ ಅರವಿಂದ್ ಬೆಲ್ಲದ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್ ವಕ್ಫ್ ವಿವಾದ ಕುರಿತು ಚರ್ಚಿಸಲು ಪ್ರಶ್ನೋತ್ತರ ಅವಧಿ ಬದಿಗಿಡುವಂತೆ ಸಭಾಧ್ಯಕ್ಷರನ್ನು ಒತ್ತಾಯಿಸಿದರು. ಇದಕ್ಕೆ ಅವಕಾಶ ನೀಡದ ಸ್ಪೀಕರ್ ಯು.ಟಿ ಖಾದರ್ ನಿಯಮ ಪ್ರಕಾರವೇ ಕಲಾಪ ನಡೆಯಲಿದೆ ಎಂದು ಪ್ರತಿಪಕ್ಷದ ಸದಸ್ಯರಿಗೆ ಹೇಳಿದರು. ಇದರ ನಡುವೆ ಬಿಜೆಪಿ ಮತ್ತು RSS ಬಸವಣ್ಣ ವಿರೋಧಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ನೀಡಿದ್ದು ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

2. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ ಆದಿತ್ಯ ಠಾಕ್ರೆ ಒತ್ತಾಯ

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ ಅತ್ತ ಮಹಾರಾಷ್ಟ್ರದಲ್ಲಿ ಬೆಳಗಾವಿ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಗಡಿ ವಿವಾದ ಇತ್ಯರ್ಥ ಆಗುವವರೆಗೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ವೊರ್ಲಿ ಕ್ಷೇತ್ರದ ಶಾಸಕ ಆದಿತ್ಯ ಠಾಕ್ರೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಬೆಳಗಾವಿಯಲ್ಲಿ ಪ್ರತಿ ಬಾರಿ ಅಧಿವೇಶನ ನಡೆಯುವಾಗಲೂ MES ಕ್ಯಾತೆ ತೆಗೆಯುವುದು ಸಾಮಾನ್ಯವಾಗಿದೆ. ಈ ಬಾರಿಯೂ ಸಂಭಾಜಿ ವೃತ್ತದ ಬಳಿ ಮಹಾಮೇಳವ್ ನಡೆಸುತ್ತಿದ್ದ ಎಂಇಎಸ್ ಮುಖಂಡ ಮನೋಹರ ಕಿಣೇಕರ, ಆರ್ ಎಂ. ಪಾಟೀಲ್ ಸೇರಿ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಧಿವೇಶನಕ್ಕೆ ಒಂದು ದಿನ ಮುಂಚೆಯೇ ಬೆಳಗಾವಿಯಲ್ಲಿ ಮಹಾಮೇಳವ್ ನಡೆಸಲು ಎಂಇಎಸ್ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಗೊಂದಲಗಳು ಸೃಷ್ಟಿಯಾಗುವುದನ್ನು ತಡೆಯುವ ಉದ್ದೇಶದಿಂದ ಹಾಗೂ ಮಹಾಮೇಳವಕ್ಕೆ ಬ್ರೇಕ್ ಹಾಕಲು ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

3. ನಿಷೇಧಾಜ್ಞೆ ಜಾರಿಗೊಳಿಸಿ ಪಂಚಮಸಾಲಿ ಹೋರಾಟ ಹತ್ತಿಕ್ಕಲು ಸರ್ಕಾರದಿಂದ ಯತ್ನ: ಜಯಮೃತ್ಯುಂಜಯ ಸ್ವಾಮೀಜಿ

ಬೆಳಗಾವಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ ಎಂದು ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಪಂಚಮಸಾಲಿ ಮೀಸಲಾತಿ ಹೋರಾಟಗಾರರು ನಾಳೆ ಪಟ್ಟಣದಲ್ಲಿ ಟ್ರ್ಯಾಕ್ಟರ್ ರ್ಯಾಲಿಯನ್ನು ಆಯೋಜಿಸಿದ್ದರು. ಆದರೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿ ಪಟ್ಟಣಕ್ಕೆ ಟ್ರ್ಯಾಕ್ಟರ್‌ಗಳ ಪ್ರವೇಶವನ್ನು ನಿರ್ಬಂಧಿಸಿದೆ ಎಂದು ಆರೋಪಿಸಿದ್ದಾರೆ. 2012ರ ಡಿಸೆಂಬರ್‌ನಿಂದ ಜಯಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಸಮುದಾಯವನ್ನು ಇತರೆ ಹಿಂದುಳಿದ ಜಾತಿಗಳ 2ಎ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಚಮಸಾಲಿ ಸಮುದಾಯದ ಪ್ರತಿಭಟನೆಗೆ ಕಾಂಗ್ರೆಸ್ ಸರ್ಕಾರ ನಿರ್ಬಂಧ ಹೇರಿರುವುದನ್ನು ಪ್ರತಿಪಕ್ಷ ಬಿಜೆಪಿ ಶಾಸಕರು ಟೀಕಿಸಿದ್ದಾರೆ. ಹಿಟ್ಲರ್ ಸರ್ಕಾರ ಎಂದು ಟೀಕಿಸಿದ ಬಿಜೆಪಿ ಶಾಸಕರು ವಿಧಾನಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

4. Darshanಗೆ ತಾತ್ಕಾಲಿಕ ರಿಲೀಫ್, ಮಧ್ಯಂತರ ಜಾಮೀನು ಮುಂದುವರಿಕೆ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆಗಿರುವ ನಟ ದರ್ಶನ್ ಗೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ದರ್ಶನ್ ರ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಬೆನ್ನು ನೋವಿನ ಸಮಸ್ಯೆ ಹಿನ್ನೆಲೆಯಲ್ಲಿ ದರ್ಶನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ದಿನಾಂಕದವರೆಗೂ ಮಧ್ಯಂತರ ಜಾಮೀನು ವಿಸ್ತರಣೆ ಮಾಡಿ ಹೈಕೋರ್ಟ್ ಆದೇಶ ನೀಡಿದೆ. ಮಧ್ಯಂತರ ಜಾಮೀನು ಅವಧಿ ಡಿಸೆಂಬರ್ 11ಕ್ಕೆ ಅಂತ್ಯವಾಗುವ ಹಿನ್ನೆಲೆಯಲ್ಲಿ ವಿಸ್ತರಣೆಗಾಗಿ ಮನವಿ ಮಾಡಲಾಗಿತ್ತು. ಇದೀಗ ಡಿಸೆಂಬರ್ 11ಕ್ಕೆ ದರ್ಶನ್ ಅವರ ಶಸ್ತ್ರ ಚಿಕಿತ್ಸೆಗೆ ದಿನಾಂಕ ನಿಗದಿ ಆಗಿರುವ ವಿಚಾರ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಹೀಗಾಗಿ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಮತ್ತೊಂದೆಡೆ ರೆಗ್ಯುಲರ್ ಬೇಲ್ ವಿಚಾರಣೆಯ ವಾದ-ಪ್ರತಿವಾದ ಮುಗಿದಿದ್ದು ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಹೀಗಾಗಿ ಹೈಕೋರ್ಟ್ ಆದೇಶ ಬರುವ ತನಕ ಮಧ್ಯಂತರ ಜಾಮೀನು ಅವಧಿ ಮುಂದುವರಿಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com