
ಬೆಂಗಳೂರು: ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 3,350ಕ್ಕೂ ಹೆಚ್ಚು ಬಾಣಂತಿಯರ ಸಾವುಗಳು ಸಂಭವಿಸಿವೆ. ನಮ್ಮ ಅವಧಿಯಲ್ಲಿ ಸಾವುನೋವು ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿ- ಅಂಶಗಳ ಮೂಲಕ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಇತ್ತೀಚಿನ ಬಾಣಂತಿಯರ ಸಾವಿನ ಕುರಿತು ಪ್ರತಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಚೇರಿ ಇಂದು ಬಾಣಂತಿಯರ ಸಾವಿನ ಬಗ್ಗೆ ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದೆ.
ಕಳೆದ ಐದು ವರ್ಷಗಳಲ್ಲಿ ಒಟ್ಟು 3,364 ಬಾಣಂತಿಯರು ಮೃತಪಟ್ಟಿದ್ದಾರೆ. ಅಂಕಿ-ಅಂಶಗಳ ಪ್ರಕಾರ, ಬಿಜೆಪಿ ಅಧಿಕಾರದಲ್ಲಿದ್ದಾಗ ಕೋವಿಡ್ -19 ಸಮಯದಲ್ಲಿ ಸಂಭವಿಸಿದ ಅತಿ ಹೆಚ್ಚು ತಾಯಂದಿರ ಸಾವುಗಳನ್ನು ಬಹಿರಂಗಪಡಿಸಿದೆ.
2019-2020 ರಲ್ಲಿ, 662 ತಾಯಂದಿರ ಸಾವುಗಳು ವರದಿಯಾಗಿದ್ದು, ನಂತರದ ವರ್ಷದಲ್ಲಿ ಈ ಸಂಖ್ಯೆ 714ಕ್ಕೆ ಸ್ವಲ್ಪ ಏರಿಕೆಯಾಗಿದೆ.
2021-2022 ರಲ್ಲಿ 595 ಬಾಣಂತಿಯರ ಸಾವು, 2022-2023 ರಲ್ಲಿ 527 ಮತ್ತು 2023-2024 ರಲ್ಲಿ 518 ಸಾವುಗಳು ದಾಖಲಾಗಿವೆ.
ನವೆಂಬರ್ 2024 ರ ಹೊತ್ತಿಗೆ, ರಾಜ್ಯದಲ್ಲಿ ತಾಯಂದಿರ ಸಾವಿನ ಸಂಖ್ಯೆ 348 ರಷ್ಟಿದೆ.
ಭಾನುವಾರ, ರಾಜ್ಯ ಸರ್ಕಾರ ಬಳ್ಳಾರಿ ಆಸ್ಪತ್ರೆ ಮತ್ತು ರಾಜ್ಯಾದ್ಯಂತ ಇತರ ಸ್ಥಳಗಳಲ್ಲಿ ಬಾಣಂತಿಯರ ಸಾವಿನ ಕುರಿತು ತನಿಖೆಗಾಗಿ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿದೆ.
Advertisement