
ಬೆಳಗಾವಿ: ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ ಎಂದು ಬೆಳಗಾವಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವ ಕುರಿತು ಜಯಮೃತ್ಯುಂಜಯ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾಗಿದ್ದು, ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಮಂಗಳವಾರ ಪಟ್ಟಣದಲ್ಲಿ ಟ್ರ್ಯಾಕ್ಟರ್ ರ್ಯಾಲಿಯನ್ನು ಆಯೋಜಿಸಿದ್ದಾರೆ. ಆದರೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿ ಪಟ್ಟಣದಲ್ಲಿ ಟ್ರ್ಯಾಕ್ಟರ್‌ಗಳ ಪ್ರವೇಶವನ್ನು ನಿರ್ಬಂಧಿಸಿದೆ.
ಕೂಡಲ ಸಂಗಮ ಪಂಚಮಸಾಲಿ ಗುರು ಪೀಠದ ಮಠಾಧೀಶರು 2012ರ ಡಿಸೆಂಬರ್‌ನಿಂದ ಪಂಚಮಸಾಲಿ ಸಮುದಾಯವನ್ನು ಇತರೆ ಹಿಂದುಳಿದ ಜಾತಿಗಳ 2ಎ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸುವಾಗ ಇಂತಹ ನಿರ್ಬಂಧಗಳನ್ನು ವಿಧಿಸಬಾರದು. ನಮ್ಮ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ನಾವು ಹಿಂಸಾತ್ಮಕ ಹೋರಾಟಕ್ಕೆ ಎಂದೂ ಪ್ರಚೋದನೆ ನೀಡಿಲ್ಲ. ಹೋರಾಟ ತಡೆಯುವ ಪ್ರಯತ್ನವನ್ನು ಸರ್ಕಾರ ಮಾಡಬಾರದು ಎಂದು ಸಿಎಂ ಅವರಿಗೆ ಮನವಿ ಮಾಡುತ್ತೇನೆ’’ ಎಂದರು.
ಪಂಚಮಸಾಲಿ ಸಮುದಾಯವು ಪ್ರಸ್ತುತ 3B ವರ್ಗದ ಅಡಿಯಲ್ಲಿದೆ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗಗಳಲ್ಲಿ ಶೇಕಡಾ ಐದು ಮೀಸಲಾತಿಯನ್ನು ಪಡೆಯುತ್ತದೆ. ಆದರೆ ಅದನ್ನು 2ಎ ಸೇರಿಸಬೇಕು ಎಂದು ಶ್ರೀಗಳು ಒತ್ತಾಯಿಸುತ್ತಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲಸಂಗಮ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಾಳೆ ಟ್ರ್ಯಾಕ್ಟರ್‌ಗಳ ಮೂಲಕ ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ವಿ.ಅಶೋಕ್ ಗೋಪನಾಳು ತಿಳಿಸಿದ್ದಾರೆ.
Advertisement