ವಕ್ಫ್ ಆಸ್ತಿ ಒತ್ತುವರಿ ತನಿಖಾ ವರದಿ ಬಗ್ಗೆ ಮಾತನಾಡದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ 150 ಕೋಟಿ ರೂಪಾಯಿ ಲಂಚದ ಆಮಿಷ ನೀಡಿದ್ದರು ಎಂದು ಬಿಜೆಪಿ ಅವಧಿಯಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವುದು ಬಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ, ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ನಮ್ಮ ಮನೆಗೆ ಬಂದು ವಕ್ಪ್ ಆಸ್ತಿ ಒತ್ತುವರಿ ಬಗ್ಗೆ ತನಿಖೆ ನಡೆಸಿ ನೀಡಿರುವ ವರದಿ ಬಗ್ಗೆ ಮೌನವಹಿಸುವಂತೆ ಕೇಳಿಕೊಂಡಿದ್ದರು. ಇದಕ್ಕಾಗಿ 150 ಕೋಟಿ ರೂಪಾಯಿ ಆಮಿಷವೊಡ್ಡಿದ್ದರು. ನಾನು ಅವರಿಗೆ ಗದರಿಸಿ ಓಡಿಸಿದ್ದೆ. ನಂತರ ಈ ಎಲ್ಲ ಘಟನೆಗಳನ್ನು ಉಲ್ಲೇಖಿಸಿ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೆ ಎಂದು ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ. ನರೇಂದ್ರ ಮೋದಿ ಈ ಆರೋಪದ ಬಗ್ಗೆ ಮೌನವಾಗಿರುವುದು ಸಂಶಯ ಮೂಡಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ, ಬೆಂಗಳೂರಿನಲ್ಲಿ ಹೆಂಡತಿ ಕಾಟಕ್ಕೆ ಮತ್ತೋರ್ವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿಯ ಕಿರುಕುಳ ತಾಳಲಾರದೇ ತಿಪ್ಪಣ್ಣ ಎಂಬ ಪೊಲೀಸ್ ಪೇದೆ ಬೈಯ್ಯಪ್ಪನಹಳ್ಳಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ತಿಪ್ಪಣ್ಣ ತಂದೆ ದೂರು ನೀಡಿದ್ದು, ತನ್ನ ಮಗನಿಗೆ ನ್ಯಾಯ ಕೊಡಿಸುವಂತೆ ದೂರಿನಲ್ಲಿ ಕೋರಿದ್ದಾರೆ. ಆತ್ಮಹತ್ಯೆಗೂ ಮುನ್ನ ತಿಪ್ಪಣ್ಣ ಡೆತ್ ನೋಟ್ ಬರೆದಿಟ್ಟಿದ್ದು, ತಮ್ಮ ಸಾವಿಗೆ ಹೆಂಡತಿ ಹಾಗೂ ಮಾವ ಕಾರಣ. ಹೆಂಡತಿ, ಮಾವ ಕಿರುಕುಳ ನೀಡುತ್ತಿದ್ದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ ಎನ್ನಲಾಗಿದೆ. ಗುರುವಾರ ಕರೆ ಮಾಡಿ ‘ನೀನು ಸತ್ತು ಹೋಗು, ನನ್ನ ಮಗಳು ಚೆನ್ನಾಗಿ ಇರುತ್ತಾಳೆ’ ಎಂದು ಹೇಳಿ ಅವಾಚ್ಯ ಪದಗಳಿಂದ ಮಾವ ನಿಂದಿಸಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ತಿಪ್ಪಣ್ಣ ಉಲ್ಲೇಖಿಸಿದ್ದಾರೆ. ಡೆತ್ ನೋಟ್ ಆಧರಿಸಿ ತಿಪ್ಪಣ್ಣ ಪತ್ನಿ ಹಾಗೂ ಮಾವನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಿಡಿಎ ಮಾದರಿಯಲ್ಲಿ ಮುಡಾಗೆ ಪ್ರತ್ಯೇಕ ಕಾಯ್ದೆ ರೂಪಿಸಲು ಶುಕ್ರವಾರ ಸುವರ್ಣಸೌಧದಲ್ಲಿ ನಡೆದ ಸಿಎಂ ನೇತೃತ್ವದ ಸಂಪುಟ ಸಭೆ ಅನುಮೋದನೆ ನೀಡಿದ್ದು, ಮುಂದಿನ ವಾರ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ. ಬಹುಕಾಲದಿಂದ ನಗರಾಭಿವೃದ್ಧಿ ಇಲಾಖೆಯಡಿ ಮುಡಾ ಕಾರ್ಯ ನಿರ್ವಹಿಸುತ್ತಿದೆ. ಹೊಸ ಕಾಯ್ದೆಯಂತೆ ಭೂಸ್ವಾಧೀನ, ನಿವೇಶನ ಹಂಚಿಕೆ, ನಕ್ಷೆ ಮಂಜೂರಾತಿ ನೀಡಲಾಗುವುದು ಸರ್ಕಾರದ ಉದ್ದೇಶವಾಗಿದೆ. ಇನ್ನು ಪಂಚಮಸಾಲಿ ವಿಷಯವನ್ನು ಅನೌಪಚಾರಿಕವಾಗಿ ಚರ್ಚಿಸಿದ ಸಂಪುಟ ಸಭೆಗೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಪಂಚಮಸಾಲಿ ವಿಚಾರದಲ್ಲಿ ಗೊಂದಲ ಮೂಡಿಸಲು ಸಂಪುಟ ಸಭೆ ಬಯಸದೆ ಸಂವಿಧಾನ ಬದ್ಧವಾಗಿಯೇ ಸಮಸ್ಯೆ ಬಗೆಹರಿಸಲು ನಿರ್ಧರಿಸಿದೆ.
ಕೊರೊನಾ ವೇಳೆ ವೈದ್ಯಕೀಯ ಉಪಕರಣಗಳನ್ನು ಖರೀದಿಸಿರುವುದರಲ್ಲಿ ನಡೆದಿರುವ ಅಕ್ರಮ ಪ್ರಕರಣದಲ್ಲಿ ಖಾಸಗಿ ಕಂಪನಿಗಳ ಮಾಲೀಕರು ಹಾಗೂ ವೈದ್ಯಕೀಯ ಇಲಾಖೆಯ ಅಧಿಕಾರಿಗಳ ವಿರುದ್ಧ ವಿಧಾನಸೌಧ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಲೆಕ್ಕ ಪತ್ರಾಧಿಕಾರಿ ಡಾ.ಎಂ.ವಿಷ್ಣುಪ್ರಸಾದ್ ನೀಡಿದ ದೂರು ಆಧರಿಸಿ ವೈದ್ಯ ಡಾ.ಗಿರೀಶ್, ಇಲಾಖೆಯ ಅಧಿಕಾರಿಗಳಾದ ಜೆ.ಪಿ.ರಘು ಮುನಿರಾಜು, ಲಾಜ್ ಎಕ್ಸ್ಪರ್ಟ್ ಹಾಗೂ ಪ್ರೊಡೆಂಟ್ ಕಂಪನಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. N95 ಮಾಸ್ಕ್, ಪಿಪಿಇ ಕಿಟ್ ಹಾಗೂ ಇತರ ಸಾಮಗ್ರಿಗಳನ್ನು ಸಂಗ್ರಹಿಸಿರುವ ಸನ್ನಿವೇಶವನ್ನು ದುಬರ್ಳಕೆ ಮಾಡಿಕೊಂಡು ಕಾನೂನಿನ ಎಲ್ಲಾ ಪ್ರಕ್ರಿಯೆ ಗಾಳಿಗೆ ತೂರಿ 167 ಕೋಟಿ ರೂಪಾಯಿ ನಷ್ಟ ಉಂಟು ಮಾಡಿರುವ ಆರೋಪವಿದೆ.
ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಟೆಕ್ಕಿ ಅತುಲ್ ಸುಭಾಷ್ ಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಅವರ ಪತ್ನಿ ಮತ್ತು ಅವರ ಕುಟುಂಬ ಸದಸ್ಯರು ನಿರೀಕ್ಷಣಾ ಜಾಮೀನು ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಉತ್ತರ ಪ್ರದೇಶದ ಜಾನ್ಪುರ್ ನಲ್ಲಿರುವ ನಿಕಿತಾ ಸಿಂಘಾನಿಯಾ ಮನೆಗೆ ತೆರೆಳಿ ಪೊಲೀಸರು ನೋಟಿಸ್ ನೀಡಿ, ಮೂರು ದಿನಗಳೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅತುಲ್ ಸುಭಾಷ್ ಪತ್ನಿ ಮತ್ತು ಆಕೆಯ ಕುಟುಂಬ ಸದಸ್ಯರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು.
Advertisement