
ಹುಬ್ಬಳ್ಳಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಿಜೆಪಿ ಆಸಕ್ತಿ ತೋರಿಸುತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ಟೀಕಿಸಿದ್ದಾರೆ.
ಉಳಿದ ನಾಲ್ಕು ದಿನಗಳಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಏನು ಚರ್ಚೆಯಾಗಲಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಬಿಜೆಪಿಗೆ ರಾಜಕೀಯ ಬಿಟ್ಟರೆ ಬೇರೇನೂ ಆಸಕ್ತಿ ಇಲ್ಲ, ಅವರ ಪಕ್ಷದಲ್ಲಿ ಒಗ್ಗಟ್ಟು ಇಲ್ಲ ಎಂದರು.
ಉತ್ತರ ಕರ್ನಾಟಕದ ಉತ್ತರ ಕರ್ನಾಟಕದ ನೀರಾವರಿ ವಿಚಾರವಾಗಿ ಚರ್ಚೆಯಾಗಬೇಕು ಎಂಬ ಪ್ರಶ್ನೆಗೆ, ನೀರಾವರಿ ವಿಚಾರವಾಗಿ ಚರ್ಚೆ ಮಾಡಲು ನಾನು ಸಿದ್ಧ. ನೀರಾವರಿ ಜತೆಗೆ ಬೇರೆ ವಿಚಾರಗಳೂ ಚರ್ಚೆಯಾಗಲಿ ಎಂದು ಉತ್ತರಿಸಿದರು.
ಮಹದಾಯಿ ಯೋಜನೆಗೆ ತಾರ್ಕಿಕ ಅಂತ್ಯ ಯಾವಾಗ ಎಂದು ಕೇಳಿದಾಗ, ಕೇಂದ್ರ ಅರಣ್ಯ ಸಚಿವರು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನೂ ಭೇಟಿ ಮಾಡಿ ಚರ್ಚೆ ಮಾಡಿದ್ದು, ಮಹದಾಯಿ ಯೋಜನೆ ಕಾಮಗಾರಿಗಳ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕೇಂದ್ರದ ಅನುಮತಿ ದೊರೆತ ತಕ್ಷಣ ಕೆಲಸ ಆರಂಭವಾಗುತ್ತದೆ ಎಂದು ತಿಳಿಸಿದರು.
ಮಹದಾಯಿ ಯೋಜನೆ ವಿಚಾರವಾಗಿ ಸಂಭ್ರಮಾಚರಣೆ ಮಾಡಿದ್ದು ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಶಿ. ಹೀಗಾಗಿ ಅವರೇ ನೇತೃತ್ವ ವಹಿಸಿ ಈ ಯೋಜನೆಗೆ ಅನುಮತಿ ಕೊಡಿಸಬೇಕು. ಅವರು ಅರಣ್ಯ ಇಲಾಖೆ ಅನುಮತಿ ಕೊಡಿಸಲಿ ನಾವು ಕೆಲಸ ಆರಂಭಿಸುತ್ತೇವೆ. ಅನುಮತಿ ಸಿಗುವ ವಿಶ್ವಾಸ ಇದೆ" ಎಂದು ತಿಳಿಸಿದರು.
ಕೋವಿಡ್ ಅಕ್ರಮದ ಬಗ್ಗೆ ನ್ಯಾ.ಕುನ್ಹಾ ಸಮಿತಿ ವರದಿ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ. ಬಿಜೆಪಿ ಅವರ ಮೇಲೆ ಕೇಸು ದಾಖಲಿಸಲು ನಾವು ತನಿಖೆ ಮಾಡುತ್ತಿಲ್ಲ. ವರದಿ ಶಿಫಾರಸ್ಸಿನಂತೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಿದ್ದು, ಮುಂದೆ ಏನು ಮಾಡುತ್ತಾರೋ ನೋಡೋಣ ಎಂದರು.
Advertisement