
ಉಡುಪಿ: ಮುರುಡೇಶ್ವರದ ಕಡಲತೀರದಲ್ಲಿ ನಾಲ್ವರು ಶಾಲಾ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆಯಿಂದಾಗಿ ಎಲ್ಲಾ ಶೈಕ್ಷಣಿಕ ಪ್ರವಾಸ ರದ್ದುಗೊಳಿಸುವಂತೆ ಆದೇಶಿಸಲಾಗಿದೆ ಎಂಬಂತಹ ನಕಲಿ ಸುತ್ತೋಲೆಯಿಂದ ಶಾಲೆಗಳು ದಾರಿ ತಪ್ಪಿದ್ದವು.
ಡಿಸೆಂಬರ್ 10 ರಂದು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುತ್ತೋಲೆ ಹರಿದಾಡುವುದರೊಂದಿಗೆ ಶಾಲಾ ಆಡಳಿತ ಮಂಡಳಿಗಳಲ್ಲಿ ಗೊಂದಲ ಉಂಟು ಮಾಡಿತ್ತು. ಈ ವದಂತಿಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ನಿರಾಕರಿಸಿದ್ದಾರೆ.
ಶೈಕ್ಷಣಿಕ ಪ್ರವಾಸ ರದ್ದುಗೊಳಿಸಲು ಯಾವುದೇ ಆದೇಶ ಹೊರಡಿಸಿಲ್ಲ. ಎಲ್ಲ ಮಕ್ಕಳನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವುದನ್ನು ಶಾಲೆಗಳು ಖಚಿತಪಡಿಸಿಕೊಳ್ಳಬೇಕು. ಪ್ರವಾಸದ ಸಮಯದಲ್ಲಿ, ಶಾಲೆಯ ಸಿಬ್ಬಂದಿ ಎಲ್ಲ ಸಮಯದಲ್ಲೂ ಅವರೊಂದಿಗೆ ಹೋಗಬೇಕು. ಯಾವುದೇ ಅವಘಡಗಳಿಗೆ ಪ್ರಾಂಶುಪಾಲರು ಅಥವಾ ನಿಯೋಜಿತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರ ಕಚೇರಿ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮುರುಡೇಶ್ವರದ ಕಡಲತೀರದಲ್ಲಿನ ದುರಂತದ ಹಿನ್ನೆಲೆಯಲ್ಲಿ ಅಂತಹ ಯಾವುದೇ ಅವಘಡ ಸಂಭವಿಸದಂತೆ ಸುರಕ್ಷತಾ ಮಾರ್ಗಸೂಚಿಗಳನ್ನು ಶಿಕ್ಷಣ ಇಲಾಖೆ ಹೊರಡಿಸಿದ್ದು, ಸುರಕ್ಷಿತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವಂತೆ ಹಾಗೂ ಸಾಕಷ್ಟು ಸಿಬ್ಬಂದಿ ಇರುವಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ.
Advertisement