
ತುಮಕೂರು: ನೀರಿಗೆ ಸೋಡಿಯಂ ಮೆಟಲ್ ಎಸೆದು ಬ್ಲಾಸ್ಟ್ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕನ್ನಡದ ಬಿಗ್ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಅವರನ್ನು ಮಧುಗಿರಿ ಕೋರ್ಟ್ ಸೋಮವಾರ 10 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಡ್ರೋನ್ ಪ್ರತಾಪ್ ಅವರ ಪೊಲೀಸ್ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಮಧುಗಿರಿಯ ಜೆಎಂಎಫ್‌ಸಿ ನ್ಯಾಯಾಲಯ ಹಾಜರುಪಡಿಸಿದರು. ಆರೋಪಿಯ ವಿಚಾರಣೆ ನಡೆಸಿದ ಕೋರ್ಟ್, ಡಿಸೆಂಬರ್ 26ರವರೆಗೂ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಮಧುಗಿರಿ ತಾಲೂಕಿನ ಜನಕಲೋಟಿ ಬಳಿ ಕೃಷಿ ಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟಿಸಿದ ಆರೋಪದ ಮೇಲೆ ಕಳೆದ ಗುರುವಾರ ಡ್ರೋನ್ ಪ್ರತಾಪ್ ಅವರನ್ನು ಮಿಡಿಗೇಶಿ ಪೊಲೀಸರು ಬಂಧಿಸಿದ್ದರು.
ಬಳಿಕ, ಪೊಲೀಸರು ಡ್ರೋನ್ ಪ್ರತಾಪ್ನನ್ನು ಶುಕ್ರವಾರ ಮಧುಗಿರಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಪೊಲೀಸರ ಮನವಿ ಮೇರೆಗೆ ನ್ಯಾಯಾಲಯ ಡ್ರೋನ್ ಪ್ರತಾಪ್ ಅವರನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿತ್ತು.
ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ ಸಂಬಂಧ ಡ್ರೋನ್ ಪ್ರತಾಪ್ ಅವರ ವಿರುದ್ಧ ಮಿಡಿಗೇಶಿ ಠಾಣೆ ಪೊಲೀಸರು BNS ಸೆಕ್ಷನ್ 288 ಮತ್ತು ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರ ಅಡಿ ಪ್ರಕರಣ ದಾಖಲಿಸಿದ್ದಾರೆ.
Advertisement