ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ವಿರುದ್ಧದ ಮುಡಾ ನಿವೇಶನಗಳ ಹಂಚಿಕೆ ಪ್ರಕರಣವನ್ನು ಹಿಂಪಡೆಯಲು ಹಣದ ಆಮಿಷ ಒಡ್ಡಲಾಗುತ್ತಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದು, ಈ ಸಂಬಂಧ ಲೋಕಾಯುಕ್ತರಿಗೆ ದೂರು ದಾಖಲಿಸಿದ್ದಾರೆ. ಪಾರ್ವತಿ ಸಿದ್ದರಾಮಯ್ಯ ಕಡೆಯವರು ಎಂದು ಹೇಳಿಕೊಂಡು ಕೆಲವರು ನನಗೆ ಹಾಗೂ ನನ್ನ ಕುಟುಂಬಕ್ಕೆ ಹಣದ ಆಮಿಷ ಒಡ್ಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದು, ಈ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಮೈಸೂರಿನ ಲೋಕಾಯುಕ್ತ ಎಸ್.ಪಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ಕೆಲವರು ಡಿ. 12ರಂದು ನನ್ನ ಮನೆಗೆ ಬಂದಿದ್ದರು. ಪಾರ್ವತಿ ಅವರು ಈ ಪ್ರಕರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಹೀಗಾಗಿ ಸಿಬಿಐ ತನಿಖೆಗೆ ಕೋರಿರುವ ಪ್ರಕರಣವನ್ನು ಹಿಂಪಡೆಯಿರಿ. ಬೇಕಿದ್ದರೆ ಲೋಕಾಯುಕ್ತ ತನಿಖೆ ಮುಂದುವರಿಯಲಿ ಎಂದು ಹೇಳಿದ್ದಾಗಿ ತಿಳಿಸಿದರು. ಆದರೆ ಇದಕ್ಕೆ ನಾನು ಒಪ್ಪಿರಲಿಲ್ಲ ಎಂದು ಹೇಳಿದ ಕೃಷ್ಣ, ಡಿ. 15ರಂದು ಮತ್ತೆ ನನ್ನ ಮನೆಗೆ ಬಂದ ಶ್ರೀನಿಧಿ ಮತ್ತು ಹರ್ಷ ಎಂಬ ಇಬ್ಬರು ನನ್ನ ಮಗನ ಜೊತೆ ಮಾತನಾಡಿದ್ದು, ಪ್ರಕರಣ ಹಿಂಪಡೆಯಲು ಇದೇ ರೀತಿ ವ್ಯಕ್ಯಿಯೊಬ್ಬರಿಗೆ ಮೂರು ಕೋಟಿ ಕೊಟ್ಟಿದ್ದೇವೆ ಎಂದು ಹಣದ ಬ್ಯಾಗ್ ಇರುವ ವಿಡಿಯೊ ತೋರಿಸಿದ್ದಾರೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದಿಢೀರ್ ದೆಹಲಿಗೆ ತೆರಳಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ರಾಜ್ಯದ ಮೂರು ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದ ನಂತರ ಬಿವೈ ವಿಜಯೇಂದ್ರ ವಿರುದ್ಧ ಯತ್ನಾಳ್ ಬಣ ಬಹಿರಂಗವಾಗಿಯೇ ಅಸಮಾಧಾನವನ್ನ ಹೊರ ಹಾಕುತ್ತಿದೆ. ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಬೇಕೆಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಟ್ಟು ಹಿಡಿದಿದ್ದಾರೆ. ಸುಮಾರು 15 ನಿಮಿಷಗಳ ಕಾಲ ವಿಜಯೇಂದ್ರ ಮೋದಿ ಜೊತೆ ಚರ್ಚಿಸಿದ್ದು, ರಾಜ್ಯದಲ್ಲಿನ ಭಿನ್ನಮತೀಯ ಚಟುವಟಿಕೆ, ಯತ್ನಾಳ್ ಮತ್ತು ತಂಡದಿಂದ ಪಕ್ಷಕ್ಕಾಗುತ್ತಿರುವ ಡ್ಯಾಮೇಜ್, ಭಿನ್ನರ ಹೇಳಿಕೆಯಿಂದಾಗಿ, ಕಾಂಗ್ರೆಸ್ ಸರ್ಕಾರದ ಎದುರು ಆಗುತ್ತಿರುವ ಮುಜುಗರವನ್ನು ಮೋದಿ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಕೊನೆಗೂ ಆಸ್ಪತ್ರೆಯಿಂದ ಇಂದು ಬೆಳಿಗ್ಗೆ ಬಿಡುಗಡೆಯಾಗಿದ್ದಾರೆ. 47 ದಿನಗಳಿಂದ ಆಸ್ಪತ್ರೆಯಲ್ಲಿದ್ದ ದರ್ಶನ್ ಇದೀಗ ಮನೆ ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ದರ್ಶನ್ ಅವರು ಬೆನ್ನುನೋವು ಹಿನ್ನೆಲೆ ನವೆಂಬರ್ 1 ರಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳ್ಳಾರಿ ಜೈಲಿನಿಂದ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿದ್ದ ನಟ ಸತತ 47 ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದು ಸದ್ಯ ಆರೋಗ್ಯ ಚೇತರಿಕೆಯಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಡಿಸೆಂಬರ್ 11ಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದು ಕೋರ್ಟ್‌ಗೆ ದರ್ಶನ್ ಪರ ವಕೀಲ ಮಾಹಿತಿ ನೀಡಿದ್ದರು. ಆ ಬಳಿಕ ಆಪರೇಷನ್ ಬದಲು ಫಿಜಿಯೋ ಥೆರಪಿ ನೀಡಲು ವೈದ್ಯರು ಸೂಚಿಸಿದ್ದರು. ಹೀಗಾಗಿ, ಶಸ್ತ್ರಚಿಕಿತ್ಸೆ ನಡೆಸಿಲ್ಲ ಎನ್ನಲಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಬೆನ್ನಲ್ಲೇ ಇತ್ತ ಕರ್ನಾಟಕ ರಾಜ್ಯದಲ್ಲಿ ತಾಪಮಾನ ಕುಸಿತವಾಗಿದ್ದು, ಮುಂದಿನ 3 ದಿನಗಳ ಕಾಲ ಶೀತಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ತಾಪಮಾನ ಗಣನೀಯವಾಗಿ ಕುಸಿತವಾಗಿದ್ದು, ಮುಂದಿನ ದಿನಗಳಲ್ಲಿ ತಾಪಮಾನ ಇನ್ನೂ 2 ರಿಂದ 4 ಡಿಗ್ರಿ ಕುಸಿಯುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಮುಂದಿನ ಮೂರ್ನಾಲ್ಕು ದಿನಗಳವರೆಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಬೀದರ್ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಿಸಿದೆ.
ಕೋಲಾರದ ಮುಳಬಾಗಿಲು ತಾಲ್ಲೂಕಿನ ವಡ್ಡಹಳ್ಳಿ-ಗುಡಿಪಲ್ಲಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಮೂರು ದ್ವಿಚಕ್ರ ವಾಹನಕ್ಕೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಭೀಕರ ಅಪಘಾತದಲ್ಲಿ ಕೋನಂಗುಂಟೆ ಗ್ರಾಮದ ರಾಧಪ್ಪ, ವೆಂಕಟರಾಮಪ್ಪ, ಅಲುವೇಲಮ್ಮ ಹಾಗೂ ಇಬ್ಬರು ಅಪರಿಚಿತರು ಮೃತಪಟ್ಟಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ.
Advertisement