News headlines 20-12-2024 | ಈಗಿನ ಶಿಕ್ಷಣ ಉಪಯೋಗವಿಲ್ಲದ ವೈದಿಕ ಶಿಕ್ಷಣ ವ್ಯವಸ್ಥೆಯಂತಾಗಿದೆ- ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ CM; ನನ್ನನ್ನು Murder ಮಾಡುವುದೇ ನಿಮ್ಮ ಉದ್ದೇಶ- ಅಧಿಕಾರಿಗಳ ವಿರುದ್ಧ CT Ravi ಗರಂ; ಕೊಲೆಗಡುಕ ಅಂದಿದ್ದು ನಿಜ- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

News Highlights
ಸುದ್ದಿ ಮುಖ್ಯಾಂಶಗಳುonline desk

1. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ; ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಮಕ್ಕಳಿಗೆ 3-ಎಚ್ ಸೂತ್ರವನ್ನು ಅಳವಡಿಸಿಕೊಳ್ಳಬೇಕಾಗಿದೆ-CM

ಮಂಡ್ಯದಲ್ಲಿ ಇಂದು ಮೂರು ದಿನಗಳ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಂಕಷ್ಟದಲ್ಲಿರುವ ಭಾಷೆಗಳಲ್ಲಿ ಕನ್ನಡವೂ ಒಂದೆಂದು ವಿದ್ವಾಂಸರು ಹೇಳುತ್ತಾರೆ. ಇದಕ್ಕೆ ಕಾರಣಗಳೇನು ಎಂಬುದನ್ನು ಕಂಡುಕೊಳ್ಳಬೇಕಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಮಕ್ಕಳಿಗೆ 3-ಎಚ್ ಸೂತ್ರವನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದ್ದಾರೆ. ಹೆಡ್, ಹಾರ್ಟ್ ಮತ್ತು ಹ್ಯಾಂಡ್ ಎಂದು ಕರೆಯಲಾಗುವ 3-ಹೆಚ್ ಸೂತ್ರಗಳು ಮೆದುಳು, ಕರುಣೆ ಮತ್ತು ಕೌಶಲ್ಯ ಸೇರಿ ರೂಪುಗೊಂಡ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕಾಗಿದೆ. ಈಗಿನ ಶಿಕ್ಷಣ ವ್ಯವಸ್ಥೆಯು ಹಳೆಯ ವೈದಿಕ ಶಿಕ್ಷಣ ವ್ಯವಸ್ಥೆಯಂತೆಯೆ ಬಾಯಿಪಾಠ ಮಾಡುವ ಉಪಯೋಗವಿಲ್ಲದ ವ್ಯವಸ್ಥೆಯಾಗಿದೆ. ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೆಳೆಯಬೇಕಾಗಿದೆ ಹೀಗಾದಾಗ ಮಾತ್ರ ಕನ್ನಡದಲ್ಲಿ ಯೋಚಿಸುವ, ಸಂಶೋಧನೆ ಮಾಡುವ, ಉತ್ಪಾದನೆ ಮತ್ತು ಮಾರುಕಟ್ಟೆ ಮಾಡುವ ಭಾಷೆಯಾಗಿ ಕನ್ನಡವು ಬೆಳೆಯುತ್ತದೆ ಎಂದು ಭಾವಿಸುತ್ತಿರುವುದಾಗಿ ಹೇಳಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಶ್ರೀ, ಗೋ.ರು.ಚನ್ನಬಸಪ್ಪ, ಸಚಿವರಾದ ಚಲುವರಾಯಸ್ವಾಮಿ, ಮಹದೇವಪ್ಪ, ಶಿವರಾಜ್ ತಂಗಡಗಿ, ಸಭಾಧ್ಯಕ್ಷ ಯು.ಟಿ.ಖಾದರ್, ಸಾಹಿತಿ ಚಂದ್ರಶೇಖರ ಕಂಬಾರ, ಶಾಸಕರು ಸೇರಿದಂತೆ ಹಲವರು ಭಾಗಿಯಾಗಿದ್ದರು.

2. ಸಿಟಿ ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಸಿಟಿ ರವಿ ಅವರನ್ನು ಬಿಡುಗಡೆಗೊಳಿಸಲು ಹೈಕೋರ್ಟ್ ಆದೇಶ ಪ್ರಕಟಿಸಿದೆ. ಇದು ಮಧ್ಯಂತರ ಆದೇಶವಾಗಿದ್ದು, ತನಿಖೆಗೆ ಸಹಕರಿಸಬೇಕೆಂದು ಹೈಕೋರ್ಟ್ ಷರತ್ತು ವಿಧಿಸಿದ್ದು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಹೇಳಿದೆ. ಸಿಟಿ ರವಿ ಪರವಾಗಿ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದರು. ಪ್ರಕರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೂ ವಿಚಾರಣೆಗೆ ಬಂದಿದ್ದು, ವಾದ ಪ್ರತಿವಾದಗಳು ನಡೆಯಿತು. ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿದೆ. ಇದಕ್ಕೂ ಮುನ್ನ ಇಂದು ಬೆಳಗಾವಿ ಕೋರ್ಟ್‌ ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಹಿಸಿತ್ತು. ಇನ್ನು ಸಿಟಿ ರವಿ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಇಂದು ಚಿಕ್ಕಮಗಳೂರು ಬಂದ್ ಗೆ ಕರೆ ನೀಡಿದ್ದರು. ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

3. CT Raviಗೆ ಕೊಲೆಗಡುಕ ಅಂದಿದ್ದು ನಿಜ-ಲಕ್ಷ್ಮಿ ಹೆಬ್ಬಾಳ್ಕರ್

ವಿಧಾನ ಪರಿಷತ್ ನಲ್ಲಿ ನಡೆದ ಪ್ರತಿಭಟನೆ, ಪರಸ್ಪರ ನಿಂದನೆಯಿಂದ ಉಂಟಾದ ವಿವಾದಕ್ಕೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಲು ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗೋಷ್ಠಿ ನಡೆಸಿದರು. ಅಂಬೇಡ್ಕರ್ ಅವರಿಗೆ ಅವಮಾನವಾಗುವ ರೀತಿ ಗೃಹ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿದ್ದನ್ನು ಖಂಡಿಸಿ ನಡೆದ ಧರಣಿಯ ಬಳಿಕ ಸೀಟ್ ಮೇಲೆ ಕುಳಿತಿದ್ದೆವು. ಆಗ ಸಿಟಿ ರವಿ ಅವರು ಇದ್ದಕ್ಕಿದ್ದಂತೆ ಬಂದು ರಾಹುಲ್ ಗಾಂಧಿಗೆ ಡ್ರಗ್ ಎಡಿಕ್ಟ್ ಎಂದರು, ಆಗ ನನಗೆ ಕೋಪ ಬಂದು, ತಾವು ಕೂಡ ಆಕ್ಸಿಡೆಂಟ್ ಮಾಡಿದ್ದೀರಿ ನೀವು ಕೊಲೆಗಾರರಾಗ್ತಿರಿ ಅಂದೆ. ಆಗ ಅವರು ನನಗೆ ಹೇಳಬಾರದ ಪದವನ್ನು ಒಂದು ಬಾರಿ ಅಲ್ಲ ಎರಡು ಬಾರಿ ಅಲ್ಲ ಪದೇ ಪದೇ ಹಲವು ಸಲ ಹೇಳಿದರು. ನೀವು ಕೊಲೆಗಡುಕ ಎಂದು ನಾನು ಹೇಳಿದ್ದು ನಿಜ ಎಂದು ಸಚಿವರು ಹೇಳಿದ್ದಾರೆ.

4. ಬೆಂಗಳೂರಿನಲ್ಲಿ ಅಮೇರಿಕ ರಾಯಭಾರ ಕಚೇರಿ ಆರಂಭ- ತೇಜಸ್ವಿ ಸೂರ್ಯ

ಜನವರಿ 2 ನೇ ವಾರದಲ್ಲಿ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿ ಸ್ಥಾಪಿಸುತ್ತಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಈ ಮಾಹಿತಿ ಹಂಚಿಕೊಂಡಿದ್ದು, ರಾಯಭಾರ ಕಚೇರಿ ಉದ್ಘಾಟನೆ ಬೆಂಗಳೂರಿನ ನಾಗರಿಕರ ದೀರ್ಘಕಾಲದ ಬೇಡಿಕೆಯನ್ನು ಪರಿಹರಿಸಲು ವರ್ಷಗಳ ನಿರಂತರ ಪ್ರಯತ್ನಗಳನ್ನು ಸೂಚಿಸುತ್ತದೆ, ಸಾವಿರಾರು ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಉದ್ಯಮಿಗಳಿಗೆ ವೀಸಾ ಅರ್ಜಿ ಪ್ರಕ್ರಿಯೆಗಳನ್ನು ಸರಳಗೊಳಿಸುತ್ತದೆ. ದ್ವಿಪಕ್ಷೀಯ ವ್ಯಾಪಾರ ಮತ್ತು ಸಹಯೋಗವನ್ನು ವರ್ಧಿಸುತ್ತದೆ ಎಂದು ಹೇಳಿದ್ದಾರೆ. 2019 ರಿಂದ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿ ತೆರೆಯಲು ತೇಜಸ್ವಿ ಸೂರ್ಯ ಒತ್ತಾಯಿಸುತ್ತಿದ್ದರು.

5. ಸಿದ್ದಗಂಗಾ ಮಠಕ್ಕೆ ನೀಡಿದ್ದ 70 ಲಕ್ಷ ರೂ ವಿದ್ಯುತ್ ಬಿಲ್ ನೋಟಿಸ್ ವಾಪಸ್

ಸಿದ್ದಗಂಗಾ ಮಠಕ್ಕೆ ಕೆಐಎಡಿಬಿ ಕೊಟ್ಟಿದ್ದ 70 ಲಕ್ಷ ರೂ. ವಿದ್ಯುತ್ ಬಿಲ್ ನೋಟಿಸ್'ನ್ನು ಸರ್ಕಾರ ವಾಪಸ್ ಪಡೆದಿದೆ. ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ನೋಟಿಸ್ ಹಿಂಪಡೆಯುವುದಾಗಿ ಸ್ಪಷ್ಟಪಡಿಸಿದ್ದಾರೆ. ‘ಸಿದ್ದಗಂಗಾ ಮಠದ ಮೇಲೆ ನಮಗೆ ಅಪಾರ ಗೌರವವಿದೆ, ನೀರು ಬಳಸದ ಮಠಕ್ಕೆ ನೋಟಿಸ್ ನೀಡಿದರೆ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಮಾಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com