ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಸರಣಿ ರಸ್ತೆ ಅಪಘಾತ ಸಂಭವಿಸಿದ್ದು 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್‌ನ ಮೇಲೆ ಕಂಟೇನರ್ ಲಾರಿ ಬಿದ್ದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ಹಾನಿಗೀಡಾಗಿವೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಕಾರಿನ ಮೇಲೆ ಪಲ್ಟಿಯಾಗಿದೆ. ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಮಳವಳ್ಳಿ ತಾಲೂಕಿನ ಬೋಸೇಗೌಡನದೊಡ್ಡಿ ಬಳಿ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವನಿಗೆ ಗಂಭೀರ ಗಾಯವಾಗಿದೆ. ವಿದ್ಯಾರ್ಥಿಗಳು ಬೆಂಗಳೂರಿನಿಂದ ಮೈಸೂರು ಜಿಲ್ಲೆಯ ತಲಕಾಡು ಪ್ರವಾಸಕ್ಕೆ ತೆರಳುತ್ತಿದ್ದರು. ಕೆಎಸ್ಆರ್ಟಿಸಿ ಬಸ್ ಓವರ್ಟೇಕ್ ಮಾಡಿ ಎದುರಿಗೆ ಬರುತ್ತಿದ್ದ ಲಾರಿಗೆ ಗುದ್ದಿದ್ದಾರೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಮ್ಮ ಕಂಪೆನಿಯ ಉದ್ಯೋಗಿಗಳಿಗೆ ಮತ್ತು ಸರ್ಕಾರಕ್ಕೆ ವಂಚಿಸಿರುವ ಪ್ರಕರಣದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿದೆ. ರಾಬಿನ್ ಉತ್ತಪ್ಪ ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ನಡೆಸುತ್ತಿದ್ದರು. ರಾಬಿನ್ ಉತ್ತಪ್ಪ ಒಡೆತನದ ಕಂಪೆನಿಯು ಸಂಬಳದಲ್ಲಿ ಪಿಎಫ್ ಹಣ ಕಟ್ ಮಾಡಿದ್ದರೂ, ಉದ್ಯೋಗಿಗಳ ಖಾತೆಗೆ ಹಾಕದೇ 23 ಲಕ್ಷ ರೂಪಾಯಿ ವಂಚಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಿಎಫ್ಓ ರಿಜಿನಲ್ ಕಮಿಷನರ್ ಷಡಾಕ್ಷರಿ ಗೋಪಾಲ ರೆಡ್ಡಿ ರಾಬಿನ್ ಉತ್ತಪ್ಪ ಅವರನ್ನು ಬಂಧಿಸುವಂತೆ ಪುಲಕೇಶಿ ನಗರ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಬಿನ್ ಉತ್ತಪ್ಪ ಅವರಿಗೆ ನೊಟೀಸ್ ನೀಡಲು ಪೊಲೀಸರು ಅವರ ಮನೆಗೆ ತೆರಳಿದ್ದರು. ಆದರೆ ಆ ವಿಳಾಸದಲ್ಲಿ ಅವರು ವಾಸವಿಲ್ಲ. ಹೀಗಾಗಿ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿದೆ.
ಇನ್ನು ನಗರದ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಹತ್ತಿರ ಇರುವ ಕ್ರಿಕೆಟರ್ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಒನ್ 8 ಕಮ್ಯೂನ್ ಬಾರ್ ಆಂಡ್ ರೆಸ್ಟೋರೆಂಟ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೊಟೀಸ್ ನೀಡಿದೆ. ಒನ್ 8 ಕಮ್ಯೂನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಅಗ್ನಿ ಸುರಕ್ಷತೆ ಅಳವಡಿಸಿಲ್ಲ ಮತ್ತು ಅಗ್ನಿಶಾಮಕ ದಳದ ಪ್ರಮಾಣ ಪತ್ರ ಪಡೆಯದೇ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ನೊಟೀಸ್ ನಲ್ಲಿ ತಿಳಿಸಲಾಗಿದೆ.
ಡಾ. ಬಿ ಆರ್ ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, ಅಮಿತ್ ಶಾ ಗೆ ಅವರಿಗೆ ಹುಚ್ಚು ನಾಯಿ ಕಚ್ಚಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೇವರ ಹೆಸರು ಸಾವಿರ ಬಾರಿ ಜಪಿಸಿದರೆ ಏಳು ಜನ್ಮದಲ್ಲಿಯೂ ಸ್ವರ್ಗ ಪ್ರಾಪ್ತಿಯಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅಂಬೇಡ್ಕರ್ ಅವರ ಹೆಸರು ಹೇಳಿದರೆ ಈ ಜನ್ಮದಲ್ಲಿಯೇ ಸ್ವಾಭಿಮಾನದ ಬದುಕು ಸಿಗುತ್ತದೆ ಎಂದು ಹೇಳಿದರು.
ಸರ್ಕಾರದ ಆದೇಶವನ್ನು ಮೀರಿ ಶುಲ್ಕ ವಸೂಲಿ ಮಾಡುತ್ತಿರುವ ರಾಜ್ಯದ ಹತ್ತಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ವಿರುದ್ಧ ಶುಲ್ಕ ನಿಯಂತ್ರಣ ಸಮಿತಿ ಕ್ರಮ ಕೈಗೊಂಡಿದೆ. ಸಂಸ್ಥೆಗಳಿಗೆ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕವನ್ನು ಮರುಪಾವತಿಸುವಂತೆ ಸೂಚಿಸಲಾಗಿದ್ದು, ಎಚ್ಚರಿಕೆ ನೀಡಲಾಗಿದೆ. ಡಾ ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಕಾಮೆಡ್-ಕೆ ಸೀಟ್‌ಗಾಗಿ ಹೆಚ್ಚುವರಿ ಶುಲ್ಕವನ್ನು ವಿಧಿಸಿದ ನಂತರ ವಿದ್ಯಾರ್ಥಿಗೆ 2.12 ಲಕ್ಷ ರೂಪಾಯಿ ಹಿಂತಿರುಗಿಸಿದೆ. ಆರಂಭದಲ್ಲಿ ಶುಲ್ಕ ಮರುಪಾವತಿಸಲು ನಿರಾಕರಿಸಿದರೂ, ಸಂಸ್ಥೆಯು ಎಫ್ ಆರ್ ಸಿಯ ಮಧ್ಯಸ್ಥಿತಿ ನಂತರ ಹಿಂತಿರುಗಿಸಿದೆ.
ಸಿಟಿ ರವಿ ಅವರನ್ನು ಬಂಧನಕ್ಕೊಳಪಡಿಸಿರದಿದ್ದಿದ್ದರೆ ಮತ್ತಷ್ಟಪ ದೊಡ್ಡ ಸಮಸ್ಯೆಯಾಗುತ್ತಿತ್ತು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಕೋರ್ಟ್ನಲ್ಲಿರುವುದರಿಂದ ಯಾವ ವಿಚಾರಗಳನ್ನು ಅದರ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಯಾವುದೇ ಪ್ರಶ್ನೆಗೂ ಉತ್ತರಿಸುವುದಿಲ್ಲ ಎಂದು ತಿಳಿಸಿದ್ದಾರೆ. 4 ಜಿಲ್ಲೆಗಳಲ್ಲಿ ಇಡೀ ರಾತ್ರಿ ಸುತ್ತಿಸಿದ ಆರೋಪ ವಿಚಾರವಾಗಿ ಮಾತನಾಡಿ, 'ಅದರ ಮಾಹಿತಿ ಇಲ್ಲ. ಮಾಹಿತಿ ಬಂದ ಬಳಿಕ ತಿಳಿಸುತ್ತೇನೆ ಎಂದರು.
Advertisement