
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ)ಯ 20 ಹೊಸ ಅಂಬಾರಿ ಉತ್ಸವ ಸ್ಲೀಪರ್ ಬಸ್‌ಗಳಿಗೆ ಮಂಗಳವಾರ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.
ಇಂದು ಮೆಜೆಸ್ಟಿಕ್ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಅಂಬಾರಿ ಉತ್ಸವ ಸ್ಲೀಪರ್ ಬಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಎರಡು ತಿಂಗಳ ಮುಂಚೆ 20 ವೋಲ್ವೋ ಬಸ್‌ಗಳಿಗೆ ಚಾಲನೆ ನೀಡಲಾಗಿತ್ತು. ಅಂಬಾರಿ ಉತ್ಸವ ಸ್ಲೀಪರ್ ಬಸ್‌ಗಳಿಗೆ ಇವತ್ತು ಚಾಲನೆ ನೀಡಿದ್ದೇವೆ. ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಹಾಗೂ ಅಂತರರಾಜ್ಯಗಳಿಗೆ ಈ ಬಸ್ಗಳು ಸಂಚಾರ ಮಾಡುತ್ತವೆ ಎಂದರು.
ಇದೇ ವೇಳೆ ಹುಮನಾಬಾದ್ ತರಬೇತಿ ಕೇಂದ್ರದಲ್ಲಿ ನಡೆದ ಚಾಲನಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 82 ಅಭ್ಯರ್ಥಿಗಳಿಗೆ ಚಾಲಕ ಕಮ್ ಕಂಡಕ್ಟರ್‌ಗಳ ತಾತ್ಕಾಲಿಕ ನೇಮಕಾತಿ ಆದೇಶವನ್ನು ಸಚಿವರು ವಿತರಿಸಿದರು.
ಈ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಗುಬ್ಬಿ ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್‌ಆರ್ ಶ್ರೀನಿವಾಸ್, ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್ ಉಪಸ್ಥಿತರಿದ್ದರು.
ಅಂಬಾರಿ ಉತ್ಸವ ಸ್ಲೀಪರ್ ಬಸ್ಸುಗಳು ಬೆಂಗಳೂರು ಮತ್ತು ಕುಂದಾಪುರ, ಮಂಗಳೂರು, ನೆಲ್ಲೂರು, ಹೈದರಾಬಾದ್, ವಿಜಯವಾಡ, ಕೋಝಿಕ್ಕೋಡ್, ತ್ರಿಶೂರ್ ಮತ್ತು ಎರ್ನಾಕುಲಂ ನಡುವೆ ಕಾರ್ಯನಿರ್ವಹಿಸಲಿವೆ.
ನಾಲ್ಕು ಸಾರಿಗೆ ನಿಗಮಗಳಲ್ಲಿ 9,000 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಇಲ್ಲಿಯವರೆಗೆ 2,144 ಚಾಲಕರು, ಕಂಡಕ್ಟರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಇನ್ನುಳಿದ 6,856 ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
Advertisement