ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಬೆಳಗಾವಿ ಅಧಿವೇಶನದ ಶತಮಾನೊತ್ಸವ ಅಂಗವಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯು ಗುರುವಾರ ಇಲ್ಲಿ "ನವ ಸತ್ಯಾಗ್ರಹ ಬೈಠಕ್" ಅನ್ನು ಪ್ರಾರಂಭಿಸಿತು. ಈ ವೇಳೆ 2025 ರಲ್ಲಿ ರಾಜಕೀಯ ಮತ್ತು ಚುನಾವಣಾ ಸವಾಲುಗಳ ಯೋಜನೆಯನ್ನು ಸಹ ರೂಪಿಸುತ್ತಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಉನ್ನತ ನಾಯಕರು ಇಲ್ಲಿ ವಿಸ್ತೃತ ಸಿಡಬ್ಲ್ಯೂಸಿ ಸಭೆಯ ಸ್ಥಳಕ್ಕೆ ಪಾದಯಾತ್ರೆ ನಡೆಸಿದರು. 100 ವರ್ಷಗಳ ಹಿಂದೆ ಮಹಾತ್ಮ ಗಾಂಧಿಯವರು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸ್ಥಳದಲ್ಲಿಯೇ ಸಭೆಯು ಪ್ರಾರಂಭವಾಯಿತು. ಇದಕ್ಕೂ ಮುನ್ನ ಇಂದು ಬೆಳಿಗ್ಗೆ, ಬೆಳಗಾವಿಯ ಟಿಳಕವಾಡಿಯಲ್ಲಿನ ವೀರಸೌಧದಲ್ಲಿ ಮಹಾತ್ಮ ಗಾಂಧೀಜಿ ನೂತನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅನಾವರಣಗೊಳಿಸುವ ಮೂಲಕ ಗಾಂಧಿ ಭಾರತ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಈ ಮಧ್ಯೆ, ಗಾಂಧಿ ಭಾರತದ ಸಲುವಾಗಿ ಕಾಂಗ್ರೆಸ್ ಮುಖಂಡರು ನಗರದಲ್ಲಿ ಪೋಸ್ಟರ್ ಗಳನ್ನು ಹಾಕಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಮಹಾತ್ಮಗಾಂಧಿ ಸೇರಿದಂತೆ ಪೋಸ್ಟರ್ ನಲ್ಲಿ ಪಿಒಕೆ ಇಲ್ಲದ ಭಾರತದ ನಕ್ಷೆಯನ್ನು ಹಾಕಲಾಗಿದ್ದು. ಇದು ಬಿಜೆಪಿ-ಜೆಡಿಎಸ್ ಆಕ್ರೋಶಕ್ಕೆ ಗುರಿಯಾಗಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಕಾಂಗ್ರೆಸ್ ಸರ್ಕಾರ ಪಾಕಿಸ್ತಾನಕ್ಕೆ ಧಾರೆ ಎರೆದು ಕೊಟ್ಟಿದೆ. ಗಾಂಧಿ ಭಾರತ ಹೆಸರಿನಲ್ಲಿ ಭಾರತದ ನಕಾಶೆಯನ್ನು ಕಾಂಗ್ರೆಸ್ಸಿಗರು ತಿರುಚಿರುವುದು ನಿಜಕ್ಕೂ ದೇಶದ್ರೋಹದ ಕೆಲಸ ಎಂದು ಆರೋಪಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ಸೇನಾ ವಾಹನವು ಕಂದಕಕ್ಕೆ ಉರುಳಿ ಬಿದ್ದು ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಹುತಾತ್ಮರಾದ ರಾಜ್ಯದ ಮೂವರು ಯೋಧರ ಪೈಕಿ ಇಬ್ಬರು ಯೋಧರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿದರು. ಬೆಳಗಾವಿಯ ಸೇನಾ ಯುದ್ಧ ಸ್ಮಾರಕದಲ್ಲಿ ಸುಬೇದಾರ್ ದಯಾನಂದ ತಿರುಕಣ್ಣನವರ್, ಮಹೇಶ್ ಮಾರಿಗೊಂಡ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿಗಳು ಪುಷ್ಪ ನಮನ ಸಲ್ಲಿಸಿ, ಅಂತಿಮ ಗೌರವ ಸಲ್ಲಿಸಿದರು. ಯೋಧರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಹೇಳಿದ ಸಿಎಂ, ಸರ್ಕಾರದಿಂದ ನಿಯಮಾನುಸಾರ ಹುತಾತ್ಮರ ಕುಟುಂಬಕ್ಕೆ ಸಲ್ಲಬೇಕಾದ ಸಕಲ ನೆರವನ್ನೂ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಮತ್ತೋರ್ವ ಯೋಧ ಅನೂಪ್ ಅವರ ಪಾರ್ಥಿವ ಶರೀರವನ್ನು ಉಡುಪಿಯ ಕುಂದಾಪುರಕ್ಕೆ ರವಾನಿಸಲಾಗಿದ್ದು ದಕ್ಷಿಣಕನ್ನಡ ಸಂಸದ ಬ್ರಿಜೇಶ್ ಚೌಟ ಹಾಗೂ ಸೇನಾಧಿಕಾರಿಗಳು ಅಂತಿಮ ನಮನ ಸಲ್ಲಿಸಿದ್ದು ಬೀಜಾಡಿ ಕಡಲ ಕಿನಾರೆಯಲ್ಲಿ ಅಂತ್ಯಕ್ರಿಯೆ ನೆರವೇರಿತು.
ನಂದಿನಿ ಹಾಲಿನ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮತ್ತೆ ಮುಂದಾಗಿದ್ದು, ಸಂಕ್ರಾಂತಿಯಿಂದ ಪ್ರತೀ ಲೀಟರ್ ಹಾಲಿನ ದರದಲ್ಲಿ 5 ರೂಪಾಯಿ ಏರಿಕೆ ಮಾಡಲು ಕೆಎಂಎಫ್ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆರು ತಿಂಗಳ ಹಿಂದಷ್ಟೇ ಕರ್ನಾಟಕದಲ್ಲಿ ನಂದಿನಿ ಹಾಲಿನ ಪ್ರಮಾಣ ಮತ್ತು ದರ ಏರಿಕೆಯಾಗಿತ್ತು. ಅಲ್ಲದೆ ಈ ಹಿಂದೆ ಹೆಚ್ಚುವರಿಯಾಗಿ ನೀಡಲಾಗುತ್ತಿದ್ದ 50 ಎಂಎಲ್ ಹೆಚ್ಚುವರಿ ಹಾಲನ್ನು ಕಡಿತ ಮಾಡಿ ಅದರ ದರವನ್ನೂ ಕೂಡ 2 ರೂಪಾಯಿ ಇಳಿಕೆ ಮಾಡಲಾಗುತ್ತದೆ ಎಂದು ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಎಲ್. ಭೀಮಾನಾಯ್ಕ ಸ್ಪಷ್ಟನೆ ನೀಡಿದ್ದಾರೆ.
ಹುಬ್ಬಳ್ಳಿಯ ಉಣಕಲ್‌ನ ಅಚ್ಚವ್ವ ಕಾಲೋನಿಯಲ್ಲಿ ನಡೆದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ ಇಬ್ಬರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಈ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ 9 ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. ಈ ಪೈಕಿ ಅಯ್ಯಪ್ಪ ಹಾಗೂ ಸಂಜಯ್ ಸವದತ್ತಿ ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ ಮೃತಪಟ್ಟಿದ್ದರು. ಉಳಿದ 7 ಮಂದಿ ಅಯ್ಯಪ್ಪ ಮಾಲಾಧಾರಿಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿ ಅರಣ್ಯ ವಲಯದಲ್ಲಿ 32 ಜೀವಂತ ನಾಡಬಾಂಬ್ಗಳು ಪತ್ತೆ ಆಗಿವೆ. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ನಾಡಬಾಂಬ್ ಪತ್ತೆ ಆಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ ಬರ್ಕತ್ ಅವರು ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾಡು ಪ್ರಾಣಿಗಳ ಬೇಟೆಗಾಗಿ ನಾಲ್ವರು ದುಷ್ಕರ್ಮಿಗಳು ನಾಡಬಾಂಬ್ ಇಟ್ಟಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳನ್ನ ಕಂಡು ಎರಡು ಬೈಕ್ ಬಿಟ್ಟು ನಾಲ್ವರು ಪರಾರಿ ಆಗಿದ್ದಾರೆ. ಸದ್ಯ ಪೊಲೀಸರು ತಿಮ್ಮಪ್ಪ ಮತ್ತು ಗುಡ್ಡಪ್ಪ ಎಂಬುವರನ್ನು ಬಂಧಿಸಿದ್ದಾರೆ.
Advertisement