
ಮೈಸೂರು: ಹನುಮ ಜಯಂತಿ ಪ್ರಯುಕ್ತ ಮೈಸೂರು ಹನುಮಂತೋತ್ಸವ ಸಮಿತಿಯಿಂದ ಇಂದು 6ನೇ ವರ್ಷದ ಹನುಮ ಹಬ್ಬ ಹಾಗೂ ಭವ್ಯ ಮೆರವಣಿಗೆ ನಡೆಯಿತು.
ಮೈಸೂರು ಅರಮನೆಯ ಕೋಟೆ ಅಂಜನೇಯ ಸ್ವಾಮಿ ದೇವಾಲಯದ ಬಳಿ ಶ್ರೀರಾಮ, ಸೀತೆ, ಅಂಜನೇಯ ಹಾಗೂ ಲಕ್ಷ್ಮಣ ವಿಗ್ರಹಗಳಿಗೆ ಆದಿಚುಂಚನಗಿರಿ ಮಠದ ಸ್ವಾಮೀಜಿ ಸೋಮೇಶ್ವರ ನಾಥ ಸ್ವಾಮೀಜಿ ಪುಷ್ಪ ನಮನ ಹಾಗೂ ಗೌರವ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಗೂಡ್ಸ್ ಆಟೋ, ಜೀಪ್ ಮತ್ತು ಟ್ರಾಕ್ಟರ್ ಗಳಲ್ಲಿ 20ಕ್ಕೂ ಅಧಿಕ ಹನುಮ ವಿಗ್ರಹಗಳನ್ನು ಹೊತ್ತು ಸಾಗಿದ ಮೆರವಣಿಗೆಯಲ್ಲಿ ಎಲ್ಲೆಲ್ಲೂ ಕೇಸರಿ ಬಾವುಟಗಳು ರಾರಾಜಿಸುತ್ತಿದವು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಡ್ರಮ್ ಹೆಜ್ಜೆಗೆ ಕುಣಿದು ಕುಪ್ಪಳಿಸಿದರು. ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತು.
ಕೋಟೆ ಆಂಜನೇಯ ಸ್ವಾಮಿ ದೇವಾಲಯ ಬಳಿ ಆರಂಭವಾದ ಮೆರವಣಿಗೆ ಅಶೋಕ ರಸ್ತೆ, ಇರ್ವಿನ್, ಸಯ್ಯಾಜಿ ರಾವ್, ಡಿ. ದೇವರಾಜ ಅರಸ್ ಮತ್ತಿತರ ರಸ್ತೆಗಳ ಮೂಲಕ ಸಾಗಿ ಗನ್ ಹೌಸ್, ಹಾರ್ಡಿಂಜ್ ವೃತ್ತದ ಮೂಲಕ ಅಂತಿಮವಾಗಿ ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಳಿ ಮುಕ್ತಾಯವಾಯಿತು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಜಿ. ಟಿ. ದೇವೇಗೌಡ, ಮಾಜಿ ಶಾಸಕ ಸಾರಾ ಮಹೇಶ್, ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತಿತರರು ಮೆರವಣಿಗೆಯಲ್ಲಿ ಕೆಲವು ದೂರ ಸಾಗಿದರು. ಮೆರವಣಿಗೆಯಲ್ಲಿ ಯಾವುದೇ ಅಹಿತರ ಘಟನೆ ನಡೆಯದಂತೆ ಆರು ಕೆಎಸ್ ಆರ್ ಪಿ ತುಕಡಿ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
Advertisement