
ಬೆಂಗಳೂರು: ಹಣಕಾಸು ಸಚಿವರಾಗಿ, ಪ್ರಧಾನ ಮಂತ್ರಿಯಾಗಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲು, ಡಾ. ಮನಮೋಹನ್ ಸಿಂಗ್ ಶಕ್ತಿ ಮೀರಿ ಪ್ರಯತ್ನಿಸಿದ್ದರು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಹೇಳಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ನಡೆದ ಸಂತಾಪ ಸೂಚನೆ ಸಭೆಯಲ್ಲಿ ಮಾತನಾಡಿದ ಅವರು, ಪಿವಿ ನರಸಿಂಹ ರಾವ್ ಸರ್ಕಾರದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿತ್ತು. ಈ ಸಂದರ್ಭದಲ್ಲಿ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಡಾ. ಸಿಂಗ್, ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡರು.
ಈ ಮೂಲಕ ದೇಶ ಆರ್ಥಿಕವಾಗಿ ದಿವಾಳಿ ಆಗುವುದನ್ನು ತಪ್ಪಿಸಿದರು ಎಂದು ಎಚ್‌ಡಿ ದೇವೇಗೌಡ ನೆನಪಿಸಿಕೊಂಡರು. 1991 ರಲ್ಲಿ ಲೋಕಸಭೆಯಲ್ಲಿ ತಮ್ಮ ಆರಂಭಿಕ ಅಧಿಕಾರಾವಧಿಯಲ್ಲಿ ಡಾ ಸಿಂಗ್ ಅವರೊಂದಿಗೆ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರು.
ಆರ್ಥಿಕವಾಗಿ ಅಪಾರ ಅನುಭವ ಹೊಂದಿದವರು. ನರಸಿಂಹ ರಾವ್ ಪ್ರಧಾನಿ ಆಗಿದ್ದಾಗ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. 130 ಟನ್ ಚಿನ್ನ ಅಡ ಇಡಲಾಗಿತ್ತು. ಆ ಸನ್ನಿವೇಶದಲ್ಲಿ ಹಣಕಾಸು ಸಚಿವರಾಗಿ ದೇಶವನ್ನು ಹಾಗೂ ದೇಶದ ಗೌರವವನ್ನು ಉಳಿಸಲು ಮನಮೋಹನ್ ಸಿಂಗ್ ಪ್ರಯತ್ನ ಶುರು ಮಾಡಿದ್ದರು ಎಂದು ಜೆಡಿಎಸ್ ವರಿಷ್ಠ ಇತಿಹಾಸವನ್ನು ಸ್ಮರಿಸಿದರು.
ನೇರ ವಿದೇಶಿ ಹೂಡಿಕೆ, ಖಾಸಗೀಕರಣ, ಮುಕ್ತ ಆರ್ಥಿಕತೆ ಸೇರಿದಂತೆ ಹಲವು ಸುಧಾರಣೆಗಳನ್ನು ತಂದರು. ಅವರ ಕಾಲದಲ್ಲಿ ನಮ್ಮ ದೇಶದ ಸ್ಥಿತಿ ಯಾರ ರೀತಿಯಲ್ಲಿ ಇತ್ತು ಎಂಬುದು ಎಲ್ಲರಿಗೂ ಗೊತ್ತು. ದೇಶದ ಆರ್ಥಿಕತೆಯನ್ನು ಸರಿಪಡಿಸಲು ಡಾ. ಸಿಂಗ್ ಸರ್ವ ಪ್ರಯತ್ನ ಮಾಡಿದರು. ಅವರ ಕೆಲವು ನೀತಿಗಳು ಟೀಕೆಗೆ ಗುರಿಯಾಗಿದ್ದವು. ಆದರೆ ಈ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ ಎಂದು ಇದೇ ವೇಳೆ ಎಚ್‌ಡಿ ದೇವೇಗೌಡ ಸ್ಪಷ್ಟಪಡಿಸಿದರು.
ಮನಮೋಹನ್ ಸಿಂಗ್, ಸರಳ ಸಜ್ಜನ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಅವರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಗೌರವಾರ್ಥವಾಗಿ ಸರ್ಕಾರಿ ಕೆಲಸ ನಡೆಯಲ್ಲ. ಪ್ರಧಾನಮಂತ್ರಿ ,ಹಣಕಾಸು ಸಚಿವ, ಆರ್ಥಿಕ ಸಲಹೆಗಾರರಾಗಿ ದೇಶಕ್ಕೆ ಸುದೀರ್ಘ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
Advertisement