
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ನೈಸ್-10 ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಬಸ್ ನಿಗಮಕ್ಕೆ ಮಾಸಿಕ ಆದಾಯದಲ್ಲಿ 1 ಕೋಟಿ ರೂಪಾಯಿ ಸಂಗ್ರಹವಾಗುತ್ತಿದೆ. ಕಳೆದ ವರ್ಷ ಡಿಸೆಂಬರ್ 23 ರಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಅಧಿಕೃತವಾಗಿ ಇದಕ್ಕೆ ಚಾಲನೆ ನೀಡಿದ್ದರು.
ನೈಸ್-10 ಮಾರ್ಗವು ತುಮಕೂರು ರಸ್ತೆಯಲ್ಲಿ ಮಾದಾವರ ನೈಸ್ ರಸ್ತೆ ಜಂಕ್ಷನ್ (BIEC) ಮತ್ತು ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ಸ್ ಸಿಟಿ ನಡುವೆ ಕಾರ್ಯನಿರ್ವಹಿಸುತ್ತದೆ. ಮಾರ್ಗದಲ್ಲಿ, ಇದು ಮಾಗಡಿ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ ಮತ್ತು ಬನ್ನೇರುಘಟ್ಟ ರಸ್ತೆಯಲ್ಲಿ ನೈಸ್ ರಸ್ತೆ ಜಂಕ್ಷನ್‌ಗಳಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕೊನೆಯಾಗುತ್ತದೆ.
ಎಲೆಕ್ಟ್ರಾನಿಕ್ಸ್ ಸಿಟಿಗೆ ಕೆಲಸಕ್ಕಾಗಿ ಪ್ರತಿನಿತ್ಯ ನೂರಾರು ಜನರು ಪ್ರಯಾಣಿಸುತ್ತಾರೆ. ಇವರಲ್ಲಿ ಹಲವರು ಮಾದಾವರ, ನೆಲಮಂಗಲ ಮತ್ತು ತುಮಕೂರು ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಿಂದ ಹತ್ತುತ್ತಾರೆ. ಬಿಎಂಟಿಸಿ ಬಸ್ ಸೇವೆಯನ್ನು ಪರಿಚಯಿಸುವ ಮೊದಲು, ಜನರು ಖಾಸಗಿ ಕ್ಯಾಬ್‌ಗಳು, ಟ್ರಕ್‌ಗಳು ಮತ್ತು ವ್ಯಾನ್‌ಗಳ ಮೇಲೆ ಅವಲಂಬಿತರಾಗಿದ್ದರು. ಬೇಡಿಕೆ ಹೆಚ್ಚಾಗಿರುವುದರಿಂದ ಬಿಎಂಟಿಸಿ ಕಳೆದ ವರ್ಷದ ಕೊನೆಯಲ್ಲಿ ನೈಸ್-10 ಬಸ್‌ಗಳನ್ನು ಪರಿಚಯಿಸಿತು ಎಂದು ಬಿಎಂಟಿಸಿಯ ಅಧಿಕಾರಿಯೊಬ್ಬರು ಹೇಳಿದರು.
ಜನರಿಂದ ಜನರಿಗೆ ಪ್ರಚಾರವಾಗಿ, ವಾಟ್ಸಾಪ್ ಗುಂಪುಗಳ ಮೂಲಕ ಈ ಮಾರ್ಗ ಜನಪ್ರಿಯವಾಗಿ ಹೆಚ್ಚು ಪ್ರಯಾಣಿಕರು ಓಡಾಡುತ್ತಾರೆ. ಆರಂಭದಲ್ಲಿ ಮಾಸಿಕ ಸುಮಾರು 60,000 ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂಖ್ಯೆಯು ಈಗ 3 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಏರಿಕೆಯಾಗಿದೆ. ಇದು ಬಿಎಂಟಿಸಿಯ ಅತ್ಯಂತ ಜನಪ್ರಿಯ ಮಾರ್ಗಗಳಲ್ಲಿ ಒಂದಾಗಿದೆ.
ಈ ಮಾರ್ಗದ ಬಸ್ಸುಗಳು 21 ವೇಳಾಪಟ್ಟಿಗಳೊಂದಿಗೆ 10 ನಿಮಿಷಗಳ ಆವರ್ತನದಲ್ಲಿ ಕಾರ್ಯನಿರ್ವಹಿಸುತ್ತವೆ. ಮೊದಲ ಬಸ್ ಬೆಳಗ್ಗೆ 6 ಗಂಟೆಗೆ ಮತ್ತು ಕೊನೆಯ ಬಸ್ ರಾತ್ರಿ 9 ಗಂಟೆಗೆ ಆರಂಭವಾಗುತ್ತದೆ ಎಂದು ಬಸ್ ನಿಗಮ ತಿಳಿಸಿದೆ.
ಬಸ್ ನಿಗಮವು ಬೇಡಿಕೆಯ ಆಧಾರದ ಮೇಲೆ ಹೊಸ ಪ್ರದೇಶಗಳು, ವಸತಿ ಬಡಾವಣೆಗಳು, ಮೆಟ್ರೋ ನಿಲ್ದಾಣಗಳು ಮತ್ತು ಇತರ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಹೊಸ ಬಸ್ ಮಾರ್ಗಗಳನ್ನು ಪರಿಚಯಿಸುತ್ತದೆ. ಹೊಸದಾಗಿ ಪರಿಚಯಿಸಲಾದ ಮಾರ್ಗಗಳಲ್ಲಿ, ಸುಮಾರು ಶೇಕಡಾ 70ರಷ್ಟು ಯಶಸ್ವಿಯಾಗಿ ಓಡಿದರೆ, ಶೇಕಡಾ 30ರಷ್ಟು ಜನರಿಂದ ಪ್ರತಿಕ್ರಿಯೆ ಅಷ್ಟೊಂದು ಸಿಗುತ್ತಿಲ್ಲ. ಬಿಎಂಟಿಸಿ ಈ ನಿರ್ದಿಷ್ಟ ಮಾರ್ಗಗಳನ್ನು ಮಾರ್ಪಡಿಸುವ ಗುರಿ ಹೊಂದಿದೆ.
Advertisement