
ಹುಬ್ಬಳ್ಳಿ: ಉಣಕಲ್‌ನ ಅಯ್ಯಪ್ಪ ದೇವಸ್ಥಾನದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಾವನ್ನಪ್ಪಿದ್ದು, ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಅವಘಡದಲ್ಲಿ ಗಾಯಗೊಂಡಿರುವ ಇನ್ನೂ ಇಬ್ಬರು ಅಯ್ಯಪ್ಪ ಭಕ್ತರು ಸದ್ಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ(ಕಿಮ್ಸ್) ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೃಹ ಸಚಿವ ಜಿ. ಪರಮೇಶ್ವರ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಆರೋಗ್ಯ ವಿಚಾರಿಸಿದ್ದರು. ಅಡುಗೆ ಅನಿಲ ಸ್ಫೋಟದಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ನಿದ್ದೆಗಣ್ಣಿನಲ್ಲಿ ಸಿಲಿಂಡರ್ ಬೀಳಿಸಿದ ಅಯ್ಯಪ್ಪ ಮಾಲಾಧಾರಿ
ಇನ್ನು ಈ ದುರಂತಕ್ಕೆ ಅಯ್ಯಪ್ಪ ಮಾಲಾಧಾರಿಯೊಬ್ಬರ ನಿದ್ದೆಗಣ್ಣು ಕಾರಣ ಎಂದು ಹೇಳಲಾಗಿದ್ದು, ಅಯ್ಯಪ್ಪ ಮಾಲೆ ಧರಿಸಿ ವೃತ ಅಚರಿಸುತ್ತಿದ್ದ ಇವರು, ಈಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದರು. ರಾತ್ರಿ ಮಲಗಿದ್ದಾಗ ಮಾಲಾಧಾರಿಯೊಬ್ಬರ ಕಾಲು ಸಿಲಿಂಡರ್‌ಗೆ ತಾಗಿ ಅದು ಉರುಳಿದೆ. ಈ ವೇಳೆ ರೆಗ್ಯೂಲೇಟರ್ ಸಡಿಲಗೊಂಡು ಗ್ಯಾಸ್ ಸೋರಿಕೆಯಾಗಿದೆ.
ಇದೇ ವೇಳೆ ದೇವಸ್ಥಾನದಲ್ಲಿ ಹಚ್ಚಿದ್ದ ದೀಪಕ್ಕೆ ಗ್ಯಾಸ್ ತಾಗಿ ಬೆಂಕಿ ಹೊತ್ತುಕೊಂಡು ಸಿಲಿಂಡರ್ ಸ್ಫೋಟವಾಗಿದೆ. ದೇವಸ್ಥಾನದ ಪ್ರಾಂಗಣದಲ್ಲೆಲ್ಲಾ ಬೆಂಕಿಹೊತ್ತುಕೊಂಡಿದ್ದು, ಸ್ಥಳೀಯರು ಬೆಂಕಿಗೆ ತುತ್ತಾಗಿದ್ದ ಅಯ್ಯಪ್ಪ ಮಾಲಾಧಾರಿಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement