ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿ.ಟಿ ರವಿ ನಡುವಿನ ಜಟಾಪಟಿ ರಾಜ್ಯಪಾಲರ ಅಂಗಳ ತಲುಪಿದೆ. ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ಸಿಟಿ ರವಿ, ಅಂದು ಪರಿಷತ್ನಲ್ಲಿ ಏನೆಲ್ಲಾ ಆಯ್ತು, ತಮ್ಮ ಬಂಧನದ ಬಳಿಕ ನಡೆದ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರಿಗೆ 8 ಪುಟಗಳ ದೂರು ನೀಡಿದ್ದು, ತಮ್ಮ ಮೇಲಿನ ಪೊಲೀಸ್ ದೌರ್ಜನ್ಯದ ಕುರಿತು ಡಿಜಿ & ಐಜಿಪಿಯಿಂದ ಸ್ಪಷ್ಟನೆ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಡಿ.19ರಂದು ಇಡೀ ರಾತ್ರಿ ಪೊಲೀಸರ ಅಮಾನವೀಯ ವರ್ತನೆ ಮಾಡಿದ್ದಾರೆ. ಬೆಳಗಾವಿ ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್, ಎಸ್‌ಪಿ ಗುಳೇದ್ ಮತ್ತು ಇತರೆ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದು, ತಮಗೆ ಪ್ರಾಣಾಪಾಯ ಇದ್ದು, ಸೂಕ್ತ ಭದ್ರತೆ ಕೊಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ದೂರಿನಲ್ಲಿ ಫೇಕ್ ಎನ್‌ಕೌಂಟರ್ ವಿಚಾರ ಪ್ರಸ್ತಾಪಿಸಿರುವ ಸಿ.ಟಿ.ರವಿ, ಡಿಕೆ ಶಿವಕುಮಾರ್ ಸೂಚನೆ ಮೇರೆಗೆ ಪೊಲೀಸರು ಸುಪಾರಿ ಕಿಲ್ಲರ್ ರೀತಿ ವರ್ತಿಸಿದರು. ನಿಗೂಢ ಸ್ಥಳಗಳಿಗೆ ಕರೆದೊಯ್ದು ಫೇಕ್ ಎನ್‌ಕೌಂಟರ್ ಮಾಡಲು ಸಂಚು ರೂಪಿಸಿದ್ದರು. ಪೊಲೀಸರು ಸುವರ್ಣ ಸೌಧದೊಳಗೆ ಪ್ರವೇಶ ಮಾಡಿ ಬಂಧಿಸಿದ್ದು ಅಕ್ರಮ, ನನ್ನ ಹಕ್ಕು ಚ್ಯುತಿ ಆಗಿದೆ ಎಂದು ಆರೋಪಿಸಿದ್ದಾರೆ.
ಗುತ್ತಿಗೆದಾರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಬಿಜೆಪಿಯವರು ಮಾಡಿರುವ ಆರೋಪ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ. ಸಚಿನ್ ಮಾನಪ್ಪ ಡೆತ್ ನೋಟ್ ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿಲ್ಲ. ಹೀಗಾಗಿ ಅವರು ರಾಜಿನಾಮೆ ನೀಡುವ ಅಗತ್ಯವಿಲ್ಲ. ಸತ್ಯಾಸತ್ಯತೆ ಹೊರಬರಲಿ ಎಂಬ ದೃಷ್ಟಿಯಿಂದ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಸಿಐಡಿಗೆ ವಹಿಸಲಾಗಿದೆ ಎಂದು ಹೇಳಿದರು. ಈಮಧ್ಯೆ, ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ರಾಜಿನಾಮೆ ನೀಡಬೇಕು. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು. ಇಲ್ಲದಿದ್ದರೆ ಜನವರಿ 4 ರಂದು ಕಲಬುರಗಿಯಲ್ಲಿ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಲಿದ್ದು ಪ್ರಿಯಾಂಕ್ ಖರ್ಗೆ ನಿವಾಸಕ್ಕೂ ಮುತ್ತಿಗೆ ಹಾಕುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಸಂಸದ ಡಿಕೆ ಸುರೇಶ್ ಅವರ ತಂಗಿ ಎಂದು ನಂಬಿಸಿ 9 ಕೋಟಿ ಮೌಲ್ಯದ ಚಿನ್ನ ಖರೀದಿಸಿದ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಐಶ್ವರ್ಯಾ ಗೌಡ ವಿರುದ್ಧ ಡಿಕೆ ಸುರೇಶ್ ದೂರು ದಾಖಲಿಸಿದ್ದಾರೆ. ಐಶ್ವರ್ಯಾ ಗೌಡ ಎಂಬುವವರು ನನ್ನ ಹೆಸರನ್ನು ದುರುಪಯೋಗಪಡಿಸಿಕೊಂಡು ಜನರಿಗೆ ವಂಚನೆ ಮಾಡುತ್ತಿರುವುದು ಮಾಧ್ಯಮಗಳಲ್ಲಿ ಕೆಲವು ದಿನಗಳಿಂದ ವರದಿಯಾಗುತ್ತಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬೆಂಗಳೂರು ನಗರ ಪೋಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದೇನೆ ಎಂದಿದ್ದಾರೆ. ಮತ್ತೊಂದೆಡೆ ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರನ್ನು ಬಳಸಿ ಚಿನ್ನದಂಗಡಿ ಮಾಲೀಕರಿಗೆ ಎರಡೂವರೆ ಕೋಟಿ ವಂಚನೆ ಮಾಡಿದ್ದ ಶ್ವೇತಾಗೌಡ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಶಿವಮೊಗ್ಗದ ಪ್ರಗತಿ ಜುವೆಲ್ಲರಿ ಮಾಲೀಕ ಬಾಲರಾಜ್ ಸೇಠ್ ಚಿನ್ನ ಖರೀದಿಸಿ 20 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನ ಕಮರಿಗೆ ಬಿದ್ದು ಗಾಯಗೊಂಡಿದ್ದ ಕೊಡಗು ಮೂಲದ 28 ವರ್ಷದ ಯೋಧ ದಿವಿನ್ ಚಿಕಿತ್ಸೆ ಫಲಿಸದೆ ಹುತಾತ್ಮರಾಗಿದ್ದಾರೆ. ಕಳೆದ ವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ವಾಹನ ಕಮರಿಗೆ ಬಿದ್ದು ನಾಲ್ವರು ಯೋಧರು ಹುತಾತ್ಮರಾಗಿದ್ದರು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಿವಿನ್ ಅವರನ್ನು ಶ್ರೀನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಶ್ವಾಸಕೋಶಕ್ಕೆ ತೀವ್ರ ಹಾನಿ ಆದ ಹಿನ್ನಲೆಯಲ್ಲಿ ಭಾನುವಾರ ರಾತ್ರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ. ಸಾರ್ವಜನಿಕರು ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗಿಯಾಗದಂತೆ ಮನವಿ ಮಾಡಿದ್ದಾರೆ. ಹೊಸ ವರ್ಷಾಚರಣೆಗೆ ಸರ್ಕಾರವು ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ಅನುಮತಿ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement