ಭಾರತದಲ್ಲಿನ ತಮ್ಮ ಹೂಡಿಕೆಗಳ ರಕ್ಷಣೆಗೆ ಆಗ್ರಹಿಸಿ ರಾಯಭಾರ ಕಚೇರಿಗಳ ಮೊರೆ ಹೋಗಲು NRI ಗಳು ನಿರ್ಧಾರ

ಭಾರತದಲ್ಲಿ ಹೂಡಿಕೆ ಮತ್ತು ಉಳಿತಾಯ ಮಾಡುತ್ತಿರುವ ಅನಿವಾಸಿ ಭಾರತೀಯರ ರಕ್ಷಣೆಗೆ ಭಾರತೀಯ ಮೂಲದ ಅನಿವಾಸಿಗಳ ತಂಡವೊಂದು ವಾಷಿಂಗ್ಟನ್, ಲಂಡನ್, ಮಸ್ಕತ್, ದುಬೈ, ಸಿಂಗಾಪೂರ, ಟೋಕಿಯೋ, ಸಿಡ್ನಿ ಮತ್ತು ಇತರ ದೇಶಗಳ ಭಾರತೀಯ ದೂತಾವಾಸಿಗಳು ಮತ್ತು ರಾಯಭಾರ ಕಚೇರಿಗಳ ಬಾಗಿಲು ತಟ್ಟಲು ಸಜ್ಜಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಭಾರತದಲ್ಲಿ ಹೂಡಿಕೆ ಮತ್ತು ಉಳಿತಾಯ ಮಾಡುತ್ತಿರುವ ಅನಿವಾಸಿ ಭಾರತೀಯರ ರಕ್ಷಣೆಗೆ ಭಾರತೀಯ ಮೂಲದ ಅನಿವಾಸಿಗಳ ತಂಡವೊಂದು ವಾಷಿಂಗ್ಟನ್, ಲಂಡನ್, ಮಸ್ಕತ್, ದುಬೈ, ಸಿಂಗಾಪೂರ, ಟೋಕಿಯೋ, ಸಿಡ್ನಿ ಮತ್ತು ಇತರ ದೇಶಗಳ ಭಾರತೀಯ ದೂತಾವಾಸಿಗಳು ಮತ್ತು ರಾಯಭಾರ ಕಚೇರಿಗಳ ಬಾಗಿಲು ತಟ್ಟಲು ಸಜ್ಜಾಗಿದ್ದಾರೆ.

ಇವರೆಲ್ಲರ ಕಳಕಳಿ ಮನವಿ ಒಂದೇ, ಅದು ಭಾರತದಲ್ಲಿ ಅವರ ಹೂಡಿಕೆಗಳು, ಉಳಿತಾಯ ಮತ್ತು ಆಸ್ತಿಗಳ ರಕ್ಷಣೆ ಮಾಡುವುದು. 10ರಿಂದ 20 ಮಂದಿ ಅನಿವಾಸಿ ಭಾರತೀಯರ ತಂಡ ಭಾರತೀಯ ದೂತಾವಾಸ ಮತ್ತು ರಾಯಭಾರ ಕಚೇರಿಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಲು ಸಮಯ ಕೇಳಿದ್ದಾರೆ. 

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿಗಳ ಜೊತೆ ಅಮೆರಿಕಾದ ಅರಿಝೋನಾದಿಂದ ಮಾತನಾಡಿದ ಎನ್ ಆರ್ ಐ ರಕ್ಷಣಾ ತಂಡದ ಅಂತಾರಾಷ್ಟ್ರೀಯ ಸಮನ್ವಯಕರಾದ ಸುಭಾಷ್ ಬಾಳಪ್ಪನವರ್, ನಾವು ಪ್ರತಿಭಟನೆ ಮಾಡುತ್ತಿಲ್ಲ, ಬದಲಿಗೆ ಭಾರತದಲ್ಲಿ ಹೂಡಿಕೆ ಮಾಡಿದ ಎನ್ ಆರ್ ಐಗಳ ಸಂಪತ್ತು ಸವೆತವಾಗುತ್ತಿರುವ ಬಗ್ಗೆ ಜನಪ್ರತಿನಿಧಿಗಳ, ಸರ್ಕಾರದ ಮತ್ತು ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ. ಕಳೆದ ಹಲವು ವರ್ಷಗಳಿಂದ ಎನ್ ಆರ್ ಐಗಳು ವಾರ್ಷಿಕವಾಗಿ ಸುಮಾರು 125 ಶತಕೋಟಿ ಡಾಲರ್ ನಷ್ಟು ಸಂಪತ್ತನ್ನು ರವಾನಿಸಿದ್ದಾರೆ. ವಿವಿಧ ದೇಶಗಳಲ್ಲಿ 3.2 ಕೋಟಿಗೂ ಅಧಿಕ ಭಾರತೀಯರು ವಾಸಿಸುತ್ತಿದ್ದಾರೆ. ಅದು ರಾಷ್ಟ್ರದ ವಿದೇಶಿ ವಿನಿಮಯದ ಮೂರರಷ್ಟಾಗಿದೆ. ವರ್ಷದಿಂದ ವರ್ಷಕ್ಕೆ ಅನಿವಾಸಿ ಭಾರತೀಯರು ಮೋಸದ ವ್ಯಕ್ತಿಗಳು, ಬಿಲ್ಡರ್‌ಗಳು ಅಥವಾ ಹೂಡಿಕೆ ಸಲಹೆಗಾರರಿಂದ ವಂಚನೆಗೊಳಗಾಗುತ್ತಿದ್ದಾರೆ. ಹಲವು ಬಾರಿ ಸರಿಯಾದ ಸಾಕ್ಷಿ ಒದಗಿಸಿದರೂ ಕೂಡ ಪೊಲೀಸರು ಮತ್ತು ಆದಾಯ ಇಲಾಖೆ ಅಧಿಕಾರಿಗಳು ವಂಚನೆಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಆನ್ ಲೈನ್ ಮೂಲಕ ವಿಚಾರಣೆಗೆ ಅವಕಾಶ: ನ್ಯಾಯಾಲಯದ ಮೊರೆ ಹೋದರೆ ನ್ಯಾಯದಾನ ವಿಳಂಬವಾಗುತ್ತದೆ. ಎನ್ ಆರ್ ಐ ಕೇಸು ದಾಖಲಿಸಿ 30ರಿಂದ 40 ವರ್ಷಗಳ ನಂತರ ತೀರ್ಪು ಬಂದರೆ ಅದರಿಂದ ಪ್ರಯೋಜನವೇನು, ಭಾರತಕ್ಕೆ ಪದೇ ಪದೇ ಬಂದು ನ್ಯಾಯಾಲಯ ಪ್ರಕರಣಗಳಲ್ಲಿ ಎನ್ ಆರ್ ಐಗಳಿಗೆ ವಿಚಾರಣೆಗೆ ಹೋಗಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಆನ್ ಲೈನ್ ಮೂಲಕ ಪೊಲೀಸ್ ವಿಚಾರಣೆ ಅಥವಾ ಕೋರ್ಟ್ ವಿಚಾರಣೆಗೆ ಹಾಜರಾಗಲು ಎನ್ ಆರ್ ಐಗಳಿಗೆ ಅಧಿಕಾರಿಗಳು ಅವಕಾಶ ಕಲ್ಪಿಸಬೇಕು ಎಂದು ಸಹ ಅವರು ಒತ್ತಾಯಿಸಿದರು.

ನಾಳೆ ದೂತಾವಾಸ ಕಚೇರಿಗೆ ಮೊರೆ: ತಮ್ಮ ಸಮಸ್ಯೆಗಳ ಬಗ್ಗೆ ಭಾರತೀಯ ದೂತಾವಾಸ ಮತ್ತು ರಾಯಭಾರ ಕಚೇರಿಗೆ ನಾಳೆ ಭೇಟಿ ನೀಡಿ ಮನವಿ ಸಲ್ಲಿಸಲು ಎನ್ ಆರ್ ಐಗಳು ಮುಂದಾಗಿದ್ದು, ಭಾರತೀಯ ಕಾನೂನುಗಳನ್ನು ಸರಳ, ಸುಲಭಗೊಳಿಸಬೇಕೆಂದು, ಎನ್ ಆರ್ ಐ (ಉಳಿತಾಯ ಮತ್ತು ಹೂಡಿಕೆ) ರಕ್ಷಣಾ ಮಸೂದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಲಿದ್ದಾರೆ.

ಅನಿವಾಸಿ ಭಾರತೀಯರು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದು ಅವರ ತೊಂದರೆಗಳಿಗೆ ಇನ್ನಾದರೂ ಪರಿಹಾರ ಕಂಡುಹಿಡಿಯಲೇಬೇಕು ಎಂದು ಸಿಂಗಾಪುರದಲ್ಲಿರುವ ಎನ್ ಆರ್ ಐ ಗುಂಪಿನ ಸದಸ್ಯ ಸಂಜಯ್ ಇಂಗ್ಲ್ ಟೋಕಿಯೋದಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡುತ್ತಾ ಒತ್ತಾಯಿಸಿದ್ದಾರೆ.

''ಹಲವು ಎನ್ ಆರ್ ಐಗಳು ತಮ್ಮ ಉಳಿತಾಯ ಸಂಪತ್ತನ್ನು ಕಳೆದುಕೊಂಡಿದ್ದಾರೆ, ಅವರ ಹೂಡಿಕೆಗಳು ದರೋಡೆಗೊಳಗಾಗಿವೆ. ಸಂಪತ್ತುಗಳ ರಕ್ಷಣೆ ಮತ್ತು ಭಾರತದಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಬೇಕು'' ಎಂದು ಮಸ್ಕತ್ ನ ಓಮನ್ ನಲ್ಲಿರುವ ಹೃದ್ರೋಗ ತಜ್ಞ ಪ್ರಶಾಂತ್ ಪಾಂಡುರಂಗ ಹೇಳುತ್ತಾರೆ. ಎನ್‌ಆರ್‌ಐ ರಕ್ಷಣಾ ಮಸೂದೆಗೆ ಎನ್‌ಆರ್‌ಐಗಳು ಅಭಿಯಾನವನ್ನು ಪ್ರಾರಂಭಿಸಲು ಮುಂದಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com