ಓಲಾ, ಊಬರ್ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಟ್ಯಾಕ್ಸಿಗಳಿಗೆ ಏಕರೂಪ ದರ ನಿಗದಿಪಡಿಸಿದ ಸರ್ಕಾರ

ಪೀಕ್ ಅವರ್​ನಲ್ಲಿ ಬೇಕಾಬಿಟ್ಟಿ ದರ ಏರಿಸಿ ಜನರ ಸುಲಿಗೆ ಮಾಡುತ್ತಿದ್ದ ಆ್ಯಪ್ ಆಧಾರಿತ ಅಗ್ರಿಗೇಟರ್‌ಗಳಾದ ಓಲಾ, ಊಬರ್, ರ್ಯಾಪಿಡೋ ಮತ್ತು ಸಿಟಿ ಟ್ಯಾಕ್ಸಿಗಳಿಗೆ ರಾಜ್ಯ ಸರ್ಕಾರ ಈಗ ಏಕರೂಪ ದರ ನಿಗದಿಪಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪೀಕ್ ಅವರ್​ನಲ್ಲಿ ಬೇಕಾಬಿಟ್ಟಿ ದರ ಏರಿಸಿ ಜನರ ಸುಲಿಗೆ ಮಾಡುತ್ತಿದ್ದ ಆ್ಯಪ್ ಆಧಾರಿತ ಅಗ್ರಿಗೇಟರ್‌ಗಳಾದ ಓಲಾ, ಊಬರ್, ರ್ಯಾಪಿಡೋ ಮತ್ತು ಸಿಟಿ ಟ್ಯಾಕ್ಸಿಗಳಿಗೆ ರಾಜ್ಯ ಸರ್ಕಾರ ಈಗ ಏಕರೂಪ ದರ ನಿಗದಿಪಡಿಸಿದೆ.

ಸಾರಿಗೆ ಇಲಾಖೆಯು ಶನಿವಾರ ಬಿಡುಗಡೆ ಮಾಡಿದ ಈ ಹೊಸ ಆದೇಶದೊಂದಿಗೆ, ರಾಜ್ಯಾದ್ಯಂತ ಅಪ್ಲಿಕೇಶನ್ ಆಧಾರಿತ ಕ್ಯಾಬ್ ಅಗ್ರಿಗೇಟರ್‌ಗಳು ಮತ್ತು ಸಿಟಿ ಟ್ಯಾಕ್ಸಿಗಳ ದರಗಳು ಏಕರೂಪವಾಗಿರುತ್ತವೆ ಮತ್ತು ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ತಿಳಿಸಿದೆ.

ಈ ಮೊದಲು, ಎರಡು ವರ್ಗದ ಟ್ಯಾಕ್ಸಿಗಳಿಗೆ ದರಗಳು ವಿಭಿನ್ನವಾಗಿದ್ದವು. ಹೊಸ ದರದ ಪ್ರಕಾರ, ವಾಹನದ ವೆಚ್ಚವನ್ನು ಆಧರಿಸಿ ಕ್ಯಾಬ್‌ಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಲಾಗಿದೆ.

10 ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ವೆಚ್ಚದ ವಾಹನಗಳಿಗೆ ಕನಿಷ್ಠ ದರವನ್ನು ನಾಲ್ಕು ಕಿ.ಮೀ.ವರೆಗೆ 100 ರೂ.ಗೆ ನಿಗದಿಪಡಿಸಲಾಗಿದ್ದು, ನಂತರ ಪ್ರತಿ ಕಿ.ಮೀಗೆ 24 ರೂ. ನಿಗದಿಪಡಿಸಲಾಗಿದೆ.

10 ಲಕ್ಷದಿಂದ 15 ಲಕ್ಷದವರೆಗಿನ ಬೆಲೆಯ ವಾಹನಗಳಿಗೆ ಕನಿಷ್ಠ ದರ 115 ರೂ. ಮತ್ತು ಪ್ರತಿ ಕಿ.ಮೀ.ಗೆ 28 ರೂ. ನಿಗದಿ ಮಾಡಲಾಗಿದೆ.

15 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ವಾಹನಗಳಿಗೆ ಕನಿಷ್ಠ ದರವನ್ನು 130 ರೂ.ಗೆ ನಿಗದಿಪಡಿಸಲಾಗಿದ್ದು, ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ 32 ರೂ. ನಿಗದಿಪಡಿಸಲಾಗಿದೆ.

ಲಗೇಜ್ ದರ ಮೊದಲಿನ 120 ಕೆಜಿ ವರೆಗೆ ಉಚಿತವಾಗಿದ್ದು, ಅದಕ್ಕಿಂತ ಹೆಚ್ಚಿದ್ದರೆ ಪ್ರತಿ 30 ಕೆಜಿಗೆ 7 ರೂ. ನಿಗದಿ ಮಾಡಲಾಗಿದೆ. ಕಾಯುವಿಕೆ ದರ ಮೊದಲು 5 ನಿಮಿಷ ಉಚಿತ. ನಂತರ ಪ್ರತಿ ನಿಮಿಷಕ್ಕೆ 1 ರೂ. ನಿಗದಿಪಡಿಸಲಾಗಿದೆ.

ಸರ್ಕಾರ ನಿಗದಿಪಡಿಸಿರೋ ಈ ದರಗಳನ್ನು ಮಾತ್ರ ಪಡೆಯಬೇಕು. ಇಲ್ಲವಾದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com