ಕರ್ನಾಟಕಕ್ಕೆ ಕೇಂದ್ರದಿಂದ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಿ: ಸಿಎಂಗೆ ಬಿಜೆಪಿ ಸವಾಲು

 ರಾಜ್ಯಕ್ಕೆ ಬರಬೇಕಿರುವ ಅನುದಾನದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ತೋರುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪವನ್ನು ರಾಜ್ಯ ಬಿಜೆಪಿ ತಳ್ಳಿಹಾಕಿದೆ.
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯಕ್ಕೆ ಬರಬೇಕಿರುವ ಅನುದಾನದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ತೋರುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪವನ್ನು ರಾಜ್ಯ ಬಿಜೆಪಿ ತಳ್ಳಿಹಾಕಿದೆ.
 
ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳಲು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಪ್ರತ್ಯಾರೋಪ ಮಾಡಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಬಿಜೆಪಿ, ಮಾನ್ಯ ಸಿದ್ದರಾಮಯ್ಯನವರೇ, ಜಲ ಜೀವನ್ ಮಿಷನ್, ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಕೇಂದ್ರ ಸರ್ಕಾರದಿಂದ ನೀರಾವರಿ ಯೋಜನೆಗಳ ಅಡಿಯಲ್ಲಿ ಬಿಡುಗಡೆಯಾದ ಹಣದ ಬಳಕೆಯ ಬಗ್ಗೆ ಶ್ವೇತಪತ್ರ ಹೊರತರುವ ಸಾಮರ್ಥ್ಯ ನಿಮ್ಮಲ್ಲಿದೆಯೇ? ಎಂದು ಪ್ರಶ್ನಿಸಿದೆ.

ತೆಲಂಗಾಣ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಚುನಾವಣೆಗೆ ಖರ್ಚು ಮಾಡಲು ಕನ್ನಡಿಗರ ದುಡಿಮೆಯ ಹಣವನ್ನು ಕಸಿದುಕೊಂಡಿರುವ ನಿಮಗೆ ಕೇಂದ್ರದ ಅನುದಾನದ ಬಗ್ಗೆ ಪ್ರಶ್ನಿಸುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ಆರೋಪಿಸಿದೆ.

''ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಜೀವಮಾನವಿಡೀ ಇತರರತ್ತ ಬೊಟ್ಟು ಮಾಡುತ್ತಿದ್ದೀರಿ, ಸೂಕ್ತ ಮಾಹಿತಿ ಇಲ್ಲದೇ ಇರುವುದು ನಿಮ್ಮ ಸರಕಾರದ ಅದಕ್ಷತೆಯನ್ನು ಬಿಂಬಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಯುಪಿಎ ಸರ್ಕಾರಕ್ಕಿಂತಲೂ 3 ಪಟ್ಟು ಹೆಚ್ಚು ತೆರಿಗೆ ಮತ್ತು ಹಂಚಿಕೆಯಲ್ಲಿ ಪಾಲು ನೀಡಿದೆ ಎಂದು ಬಿಜೆಪಿ ಹೇಳಿದೆ.

2004-2014ರ ಅವಧಿಯಲ್ಲಿ ಯುಪಿಎ ಆಡಳಿತದಲ್ಲಿ ಕಲ್ಲಿದ್ದಲು ಹಗರಣ, 2ಜಿ ಹಗರಣ ಮತ್ತು ಕಾಮನ್‌ವೆಲ್ತ್ ಹಗರಣಗಳ ನಡುವೆ ಕರ್ನಾಟಕಕ್ಕೆ ಕೇವಲ 81,795 ಕೋಟಿ ರೂ ಬಿಡುಗಡೆಯಾಗಿತ್ತು. ಇದಕ್ಕೆ ಹೋಲಿಸಿದರೆ, ಪ್ರಧಾನಿ ಮೋದಿಯವರ ಸರ್ಕಾರವು ಕರ್ನಾಟಕಕ್ಕೆ 2,82,791 ಕೋಟಿ ರೂ.ಗಳನ್ನು ನೀಡಿದೆ ಎಂಬ ಅಂಶವನ್ನು ಕಾಂಗ್ರೆಸ್ ಎಂದಿಗೂ ಮರೆಮಾಡಲು ಸಾಧ್ಯವಿಲ್ಲ, ಈ ಅನುದಾನ 245 ರಷ್ಟು ಹೆಚ್ಚಾಗಿದೆ. ಎಂದು ಬಿಜೆಪಿ ಹೇಳಿದೆ.

“ಕರ್ನಾಟಕ ರಾಜ್ಯವು ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚಿನ ಪ್ರಮಾಣದ ಹಣವನ್ನು ಪಡೆದಿದೆ ಎಂಬ ಅಂಶವನ್ನು ನೀವು ತಿರುಚುವುದು ಅಸಾಧ್ಯ. ನಿಮ್ಮಂತಹ ಸ್ವಯಂಘೋಷಿತ ಹಣಕಾಸು ತಜ್ಞರಿಗೆ, ನಿರ್ದಿಷ್ಟ ಯೋಜನೆಗಳಿಗೆ ಬಿಡುಗಡೆಯಾದ ಹಣದ ಮೊತ್ತವನ್ನು ತಿಳಿದುಕೊಳ್ಳುವುದು ಕಷ್ಟವೇನಲ್ಲ. “ಪ್ರಧಾನಿ ಮೋದಿಯವರ ಅಡಿಯಲ್ಲಿ ರಾಜ್ಯವು 2,08,882 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಪಡೆದುಕೊಂಡಿದೆ ಎಂಬುದನ್ನು ಅರಿಯುವುದಕ್ಕೆ ಮೂಲಭೂತ ಅಂಶಗಳನ್ನು ತಿಳಿದುಕೊಂಡರೆ ಸಾಕು, ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು 60,799 ಕೋಟಿ ರೂಗಳಷ್ಟೇ ಎಂದು ಬಿಜೆಪಿ ಆರೋಪಿಸಿದೆ.

“ನಮ್ಮ ರಾಜ್ಯದಲ್ಲಿ 1947 ರಿಂದ 2014 ರವರೆಗೆ ನಿಮ್ಮ ಪಕ್ಷವು 6,750 ಕಿಲೋಮೀಟರ್ ರಸ್ತೆಗಳನ್ನು ನಿರ್ಮಿಸಿರಬಹುದು. 2014ರ ನಂತರ ಪ್ರಧಾನಿ ಮೋದಿ ಸರ್ಕಾರ 13,500 ಕಿ.ಮೀ ರಸ್ತೆಗಳನ್ನು ನಿರ್ಮಿಸಿದೆ. ಸಿದ್ಧರಾಮಯ್ಯನವರೇ, ನಿಮ್ಮ ಊರಿಗೆ ತಲುಪಲು ( ಬೆಂಗಳೂರಿನಿಂದ ಮೈಸೂರು) ನಾಲ್ಕು ಗಂಟೆ ಬೇಕಿತ್ತು. ಈಗ ಒಂದೂವರೆ ಗಂಟೆಯಲ್ಲಿ ತಲುಪಲು ಸಾಧ್ಯವಾಗಿದೆ. “ಆ ರಸ್ತೆಯನ್ನು ಕೂಡ ಪ್ರಧಾನಿ ಮೋದಿ ಸರ್ಕಾರ ನಿರ್ಮಿಸಿದೆ. ನಿಮ್ಮ ಸರ್ಕಾರ 2009 ರಿಂದ 2014 ರ ನಡುವೆ ರೈಲ್ವೆ ಯೋಜನೆಗಳಿಗೆ 835 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಪ್ರಧಾನಿ ಮೋದಿ ಸರ್ಕಾರ 11,000 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ, ಮತ್ತು ಅದು ಎಷ್ಟು ಪಟ್ಟು ಹೆಚ್ಚು ಎಂದು ನೀವೇ ಹೇಳಬೇಕು ಎಂದು ಬಿಜೆಪಿ ಸಿದ್ದರಾಮಯ್ಯಗೆ ಸವಾಲು ಹಾಕಿದೆ.

“ಕಾಂಗ್ರೆಸ್ ಬೆಂಗಳೂರಿನಲ್ಲಿ ಕೇವಲ 7 ಕಿಲೋಮೀಟರ್ ಮೆಟ್ರೋ ಮಾರ್ಗವನ್ನು ನಿರ್ಮಿಸಿತ್ತು. 2014 ರಿಂದ 2023 ರ ನಡುವೆ 73 ಕಿ.ಮೀ ಮೆಟ್ರೋ ಟ್ರ್ಯಾಕ್ ಹಾಕಲಾಗಿದ್ದು ಇದು ನೀವು ಮಾಡಿದ್ದಕ್ಕಿಂತ 10 ಪಟ್ಟು ಹೆಚ್ಚಿನದ್ದಾಗಿದೆ. 67 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದಲ್ಲಿ ಏಳು ವಿಮಾನ ನಿಲ್ದಾಣಗಳನ್ನು ನಿರ್ಮಿಸಸಿದ್ದರೆ, 2014ರಲ್ಲಿ ಜನರು ಕಾಂಗ್ರೆಸ್ ನ್ನು ಮನೆಗೆ ಕಳುಹಿಸಿದ ನಂತರ, ಕರ್ನಾಟಕವೊಂದರಲ್ಲೇ 14 ವಿಮಾನ ನಿಲ್ದಾಣಗಳನ್ನು ಮೋದಿ ಸರ್ಕಾರ ನಿರ್ಮಿಸಿದೆ ಎಂದು ಬಿಜೆಪಿ ಹೇಳಿದೆ.

“ಕಳೆದ ಐದು ವರ್ಷಗಳಲ್ಲಿ, ಪ್ರಧಾನಿ ಮೋದಿ ಸರ್ಕಾರ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳಿಗಾಗಿ 30,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ 10,990 ಕೋಟಿ ರೂ.ಗಳನ್ನು ನೇರವಾಗಿ ಕರ್ನಾಟಕದ ರೈತರಿಗೆ ವಿತರಿಸಿದೆ. ಕರ್ನಾಟಕದ 62 ಲಕ್ಷಕ್ಕೂ ಹೆಚ್ಚು ಜನರು ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಮುಖ್ಯಮಂತ್ರಿಗಳೇ, ಕರ್ನಾಟಕದಲ್ಲಿ ಮೊದಲ ಐಐಟಿಯನ್ನು ಸ್ಥಾಪಿಸಿದ್ದು ಪ್ರಧಾನಿ ಮೋದಿಯವರ ಸರ್ಕಾರ ಎಂಬುದನ್ನು ನೀವು ಸಹ ತಿಳಿದಿರಬೇಕು ಎಂದು ಬಿಜೆಪಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದೆ.

ಇದುವರೆಗೂ ಕರ್ನಾಟಕಕ್ಕೆ ನ್ಯಾಯಯುತವಾಗಿ ಬರಬೇಕಿರುವ 1.87 ಲಕ್ಷ ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿಲ್ಲ ಎಂದು ಸಿಎಂ ಆರೋಪಿಸಿದ್ದಾರೆ. ಕರ್ನಾಟಕದಲ್ಲಿ 4.30 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ

“ದೇಶದಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ಮಹಾರಾಷ್ಟ್ರದ ನಂತರ ನಾವು ಎರಡನೇ ಸ್ಥಾನದಲ್ಲಿದೆ. ಈ ವರ್ಷ ನಾವು ತೆರಿಗೆಯಿಂದ 50,257 ಕೋಟಿ ರೂ. ಕರ್ನಾಟಕದಿಂದ ಸಂಗ್ರಹವಾದ 100 ರೂ.ಗಳಲ್ಲಿ ಕೇವಲ 12 ರಿಂದ 13 ರೂ.ಗಳನ್ನು ಮಾತ್ರ ವಾಪಸ್ ಪಡೆಯುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com