
ಜನಸ್ಪಂದನಕ್ಕೆ ಉತ್ತಮ ಪ್ರತಿಕ್ರಿಯೆ, 10 ಸಾವಿರ ಅಹವಾಲು
ಇಂದು ನಡೆದ ಮುಖ್ಯಮಂತ್ರಿಗಳ ಜನಸ್ಪಂದನಾ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ವಿವಿಧ ಪ್ರದೇಶಗಳಿಂದ 10,000ಕ್ಕೂ ಹೆಚ್ಚು ಮಂದಿ ವಿಧಾನಸೌಧಕ್ಕೆ ಆಗಮಿಸಿ, ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಮೂರು ತಿಂಗಳೊಳಗೆ ಅರ್ಜಿಗಳು ಇತ್ಯರ್ಥವಾಗಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಾನೂನು ರೀತಿ ಬಗೆಹರಿಸದಿದ್ದರೆ ಹಿಂಬರಹ ಕೊಡುವಂತೆ ಸ್ಪಷ್ಟ ನಿರ್ದೇಶನ ಕೊಟ್ಟಿದ್ದೇನೆ. ನಮ್ಮ ಅರ್ಜಿಗೆ ಪರಿಹಾರ ಸಿಗಲಿಲ್ಲ ಎಂಬ ಭಾವನೆ ಯಾರಿಗೂ ಬೇಡ. ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದು ರಾಜ್ಯ ಮಟ್ಟದ ಜನಸ್ಪಂದನ ಕಾರ್ಯಕ್ರಮವಾಗಿದೆ. ಕಳೆದ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಅರ್ಜಿಗಳು ಬಂದಿದ್ದವು. ಅದರಲ್ಲಿ ಶೇಕಡಾ 89ರಷ್ಟು ಅರ್ಜಿಗಳಿಗೆ ಸ್ಪಂದಿಸುವ ಕೆಲಸ ಆಗಿದೆ. ನವಂಬರ್ 27ರಂದು ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಬಹುತೇಕ ಪರಿಹಾರ ಸಿಕ್ಕಿದೆ ಎಂದು ಸಿಎಂ ಹೇಳಿದ್ದಾರೆ.
ತೆರಿಗೆ ತಾರತಮ್ಯ: ನಿರ್ಮಲಾ ಸೀತಾರಾಮನ್ ಕಚೇರಿಗೆ ಮಸಿ ಬಳಿದ NSUI ಕಾರ್ಯಕರ್ತರು, ಸಂಸದ ನಳಿನ್ ಕುಮಾರ್ ನಿವಾಸಕ್ಕೂ ಮುತ್ತಿಗೆ ಯತ್ನ
ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿಯ ನಾಮಫಲಕಕ್ಕೆ ಕಪ್ಪು ಮಸಿ ಬಳಿದು ಪ್ರತಿಭಟನೆ ನಡೆಸಿದ್ದಾರೆ. ನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ನಿರ್ಮಲಾ ಸೀತಾರಾಮನ್ ಅವರ ಕಚೇರಿ ಬಳಿ ಜಮಾಯಿಸಿದ ಎನ್‌ಎಸ್‌ಯುಐ ಕಾರ್ಯಕರ್ತರು, ಘೋಷಣೆಗಳನ್ನು ಕೂಗಿದರು. ಸ್ಥಳದಲ್ಲಿದ್ದ ವಿಧಾನಸೌಧ ಪೊಲೀಸರು ಕೂಡಲೇ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಹಂಚಿಕೆ ವಿಚಾರದಲ್ಲಿ ಅನ್ಯಾಯವಾಗಿದ್ದು, ಸಂಸದನಾಗಿ ಜಿಲ್ಲೆಗೆ ಅನುದಾನ ತರುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮನೆಗೆ ಎನ್ಎಸ್ ಯುಐ ಕಾರ್ಯಕರ್ತರು ಇಂದು ಮುತ್ತಿಗೆ ಹಾಕಲು ಯತ್ನಿಸಿದರು. ಸಂಸದರ ವಿರುದ್ಧ ಘೋಷಣೆ ಕೂಗಿದ ಎನ್‍ಎಸ್‍ಯುಐ ಕಾರ್ಯಕರ್ತರು ಕಟೀಲ್ ಅವರ ಮನೆ ಮುಂದೆ ಭಾರೀ ಹೈಡ್ರಾಮಾ ಮಾಡಿದರು. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಎನ್‍ಎಸ್‍ಯುಐ ಕಾರ್ಯಕರ್ತರನ್ನು ತಡೆದು ವಶಕ್ಕೆ ಪಡೆದುಕೊಂಡರು. ಘಟನೆ ಬಳಿಕ ಮಂಗಳೂರಿನ ಉರ್ವದಲ್ಲಿರುವ ಅಶೋಕಾ ಅಪಾರ್ಟ್ ಮೆಂಟ್ ಸುತ್ತ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಕಾಂಗ್ರೆಸ್ನದ್ದೂ ಶೇ.40 ಕಮಿಷನ್ ಸರ್ಕಾರ-ಕೆಂಪಣ್ಣ
ಶೇ.40 ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲಿಯೂ ಮುಂದುವರಿದಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದಾರೆ. ಚಾಮರಾಜಪೇಟೆಯ ಗುತ್ತಿಗೆದಾರರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿಕಾರಿಗಳಿಂದಲೇ ರಾಜ್ಯದಲ್ಲಿ ಭ್ರಷ್ಟಾಚಾರ ಬೇರೂರಿದೆ. ಮಿತಿಮೀರಿದ ಭ್ರಷ್ಟ ಅಧಿಕಾರಿಗಳಿದ್ದಾರೆ. ಬಿಬಿಎಂಪಿ, ನೀರಾವರಿ ಸೇರಿದಂತೆ ಎಲ್ಲಾ ಇಲಾಖೆಯಲ್ಲಿಯೂ ಭ್ರಷ್ಟ ಅಧಿಕಾರಿಯಾಗಳಿದ್ದಾರೆಂದು ಆರೋಪ ಮಾಡಿದರು. ಇದೇ ವೇಳೆ ವಿವಿಧ ಇಲಾಖೆಗಳಲ್ಲಿ ಕರೆದಿರುವ ಪ್ಯಾಕೇಜ್ ಟೆಂಡರ್ ನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಯೊಂದು ಕಾಮಗಾರಿಗೂ ಪ್ರತ್ಯೇಕ ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದರು.
ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿ ಅವ್ಯವಹಾರ ಪ್ರಕರಣ ಸಿಐಡಿ ತನಿಖೆಗೆ
ಕಾರ್ಕಳದ ಎರ್ಲಪಾಡಿ ಗ್ರಾಮದ ಬೈಲೂರಿನಲ್ಲಿರುವ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣದ ತನಿಖೆಯನ್ನು ಸಿಎಂ ಸಿದ್ದರಾಮಯ್ಯ ಸಿಐಡಿ ತನಿಖೆಗೆ ವಹಿಸಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಸಿಐಡಿ ತನಿಖೆಗೆ ಶಿಫಾರಸು ಮಾಡಿದ್ದರು. ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯಲ್ಲಿ ನಡೆದ ಕಳಪೆ ಕಾಮಗಾರಿ ಹಾಗೂ ಅವ್ಯವಹಾರದ ಬಗ್ಗೆ, ಜೊತೆಗೆ ಧಾರ್ಮಿಕ ಭಾವನೆಗಳಿಗೆ ಅಪಪ್ರಚಾರವಾಗಿರುವ ಸಂಬಂಧ ಸಾರ್ವಜನಿಕರಿಂದ ದೂರು ಕೇಳಿ ಬಂದಿತ್ತು.
ರಾಜ್ಯದಲ್ಲಿ ಹುಕ್ಕಾಬಾರ್ ನಿಷೇಧ
ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸಿ ರಾಜ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.ಹುಕ್ಕಾ, ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಹುಕ್ಕಾ ಉತ್ಪನ್ನ ಮಾರಾಟ, ಸೇವನೆ, ಜಾಹೀರಾತು, ಪ್ರಚೋದನೆ, ಸಂಗ್ರಹಣೆಯನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕಳೆದ ಐದಾರು ವರ್ಷಗಳಿಂದ ಹುಕ್ಕಾಬಾರ್‌ಗಳನ್ನು ನಿಷೇಧಿಸುವಂತೆ ಆಗ್ರಹಿಸಲಾಗುತ್ತಿತ್ತು. ನಿಯಮ ಉಲ್ಲಂಘಿಸಿದರೆ COTPA 2003, 2015 ಕಾಯ್ದೆ ಅನ್ವಯ ಕ್ರಮಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಹುಕ್ಕಾ ಸೇವನೆಯಿಂದ ಸಾಂಕ್ರಾಮಿಕ ಕಾಯಿಲೆಗಳಾದ ಕ್ಷಯರೋಗ, ಹೆಪಟೈಟಿಸ್ ಮತ್ತಿತರ ಕಾಯಿಲೆಗಳು ಹರಡುವ ಆತಂಕವಿರುವುದರಿಂದ ಹುಕ್ಕಾ ಬಾರ್ ಗಳನ್ನು ನಿಷೇಧಿಸಲಾಗಿದೆ.
ವೀಡಿಯೋ ಸುದ್ದಿ
Advertisement