ಜೆಡಿಎಸ್ ಮೈತ್ರಿ ವಿರುದ್ಧ ಅಪಸ್ವರ: ಮೈಸೂರಿನ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ನಾಯಕರಿಗೆ ಅಮಿತ್ ಶಾ ಖಡಕ್ ಎಚ್ಚರಿಕೆ!

ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಜತೆ ಮಾಡಿಕೊಂಡಿರುವ ಮೈತ್ರಿ ಬಗ್ಗೆ ಅಪಸ್ವರ ಎತ್ತಿದ ಬಿಜೆಪಿ ರಾಜ್ಯ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಖಡಕ್ ಎಚ್ಚರಿಕೆ ನೀಡಿದರು.
ಬಿಜೆಪಿ ನಾಯಕರ ಜೊತೆ ಅಮಿತ್ ಶಾ ಸಭೆ
ಬಿಜೆಪಿ ನಾಯಕರ ಜೊತೆ ಅಮಿತ್ ಶಾ ಸಭೆ

ಮೈಸೂರು: ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಜತೆ ಮಾಡಿಕೊಂಡಿರುವ ಮೈತ್ರಿ ಬಗ್ಗೆ ಅಪಸ್ವರ ಎತ್ತಿದ ಬಿಜೆಪಿ ರಾಜ್ಯ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಖಡಕ್ ಎಚ್ಚರಿಕೆ ನೀಡಿದರು. 

ಮೈಸೂರಿನ ರ್‍ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ಯಾರೂ ಅಪಸ್ವರ ಎತ್ತಬಾರದು. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸಂದರ್ಭ ಇಂತಹ ಅಪಸ್ವರದ ಮಾತುಗಳು ಬಂದಿದ್ದರಿಂದಲೇ ಅವರಿಗೆ ಸೋಲಾಗಿತ್ತು. ಅದೇ ಕೆಲಸವನ್ನು ನೀವು ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

ಬಿಜೆಪಿಯನ್ನು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಫೆಬ್ರವರಿ 20, 21ರಂದು ಎರಡು ದಿನಗಳ ಕಾಲ ಸಭೆ ನಡೆಸಲು ಅಮಿತ್‌ ಶಾ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಅವರ ನೇತೃತ್ವದಲ್ಲಿ ಸಭೆಗಳು ನಡೆಯಲಿದ್ದು ಅಂದಿನ ಸಭೆಗಳಲ್ಲಿ ಎಲ್ಲ ಲೋಕಸಭಾ ಕ್ಷೇತ್ರದ ಬಗ್ಗೆ ಚರ್ಚೆಯಾಗಲಿದೆ.

ಮೈಸೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್‌, ಮಾಜಿ ಮುಖ್ಯಮಂತ್ರಿಗಳಾದ ಡಿವಿ ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವರಾದ ಶ್ರೀರಾಮುಲು, ರಾಮದಾಸ್‌ ಸೇರಿದಂತೆ ಹಲವರು ಭಾಗಿಯಾದರು. ಆರ್‌ಎಸ್‌ಎಸ್‌ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಜೇಶ್‌ ಸಹ ಉಪಸ್ಥಿತರಿದ್ದರು.

ಮೈಸೂರು ಪ್ರವಾಸದಲ್ಲಿರುವ ಅಮಿತ್ ಶಾ ಭಾನುವಾರ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದು, ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com