
ಬೆಳ್ತಂಗಡಿ: ಶಿಕ್ಷಕನೊಬ್ಬ ಮಾನಹಾನಿಕಾರಕ ಮೆಸೇಜ್ ಕಳಿಸಿದ್ದಕ್ಕೆ ಮನನೊಂದ ವಿದ್ಯಾರ್ಥಿನಿಯೋರ್ವಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಧರ್ಮಸ್ಥಳದ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಧರ್ಮಸ್ಥಳದ 16 ವರ್ಷದ ಬಾಲಕಿ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಫೆಬ್ರವರಿ 5 ರಂದು ಶಾಲೆಯ ಡ್ರಾಯಿಂಗ್ ಶಿಕ್ಷಕ ರೂಪೇಶ್ ಪೂಜಾರಿ ಎಂಬಾತ ಮಾನಹಾನಿಕಾರಕ ಮೆಸೇಜ್ ಮಾಡಿದ್ದನ್ನು ತಿಳಿದು ಮನನೊಂದ ವಿದ್ಯಾರ್ಥಿನಿ ಫೆ.7 ರಂದು ಶಾಲೆಗೆ ಬರುವಾಗ ಬಿಸ್ಕೆಟ್ ಪ್ಯಾಕೆಟ್ ಜೊತೆ ಇಲಿ ಪಾಷಣವನ್ನು ಅಂಗಡಿಯಿಂದ ತಂದು ಶಾಲೆಯಲ್ಲಿ ಬಿಸ್ಕೆಟ್ ಜೊತೆಗೆ ಇಲಿ ಪಾಶಣ ಮಿಶ್ರಣ ಮಾಡಿ ಸೇವಿಸಿದ್ದಾಳೆ.
ತಕ್ಷಣ ಶಾಲೆಯ ಶಿಕ್ಷಕರು ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಿಲಿಸಿದ್ದಾರೆ. ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ಮೃತ ವಿದ್ಯಾರ್ಥಿನಿಯ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ. ಆರೋಪಿ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಜರುಗಿಸಿ ಮೃತ ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವಂತೆ ಪೋಷಕರು, ಸಾರ್ವಜನಿಕರು ಆಗ್ರಹಿಸಿದ್ದಾರೆ. ಸದ್ಯ ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿ ರೂಪೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ.
Advertisement