ಈ ದಿನದ ಸುದ್ದಿ ಮುಖ್ಯಾಂಶಗಳು: 12-02-2024

ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದ್ದು ಜಂಟಿ ಸದನವನ್ನುದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರ ಥಾವರ್ ಚಂದ್ ಗೆಹ್ಲೂಟ್ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗೆ ಬಹುಪರಾಕ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕರ್ನಾಟಕ ಸರ್ಕಾರದ ಗ್ಯಾರಂಟಿಗಳು ದೇಶಕ್ಕೆ ಮಾದರಿ: ರಾಜ್ಯಪಾಲ
ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದ್ದು ಜಂಟಿ ಸದನವನ್ನುದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರ ಥಾವರ್ ಚಂದ್ ಗೆಹ್ಲೂಟ್ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗೆ ಬಹುಪರಾಕ್ ಹೇಳಿದ್ದಾರೆ. ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. 16ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ತಮ್ಮ ಭಾಷಣದಲ್ಲಿ ರಾಜ್ಯಪಾಲರು, ಇಡೀ ದೇಶಕ್ಕೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಮಾದರಿಯಾಗಿವೆ. ಸರ್ಕಾರವು ನುಡಿದಂತೆ ನಡೆಯುತ್ತಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಡವರಿಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಾಂತ್ವನ ಒದಗಿಸಿವೆ. ಶಕ್ತಿ, ಅನ್ನಭಾಗ್ಯ, ಯುವನಿಧಿ, ಗೃಹಲಕ್ಷ್ಮೀ, ಗೃಹಜ್ಯೋತಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದರು. ಇನ್ನು ಕಾಂಗ್ರೆಸ್ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ ಎಂದು ಬಿಜೆಪಿ ಕಿಡಿಕಾರಿದೆ. ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಆದರೆ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಸುಳ್ಳು ಹೇಳಿಸಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ರೈತರನ್ನು ತಡೆಯುವ ಮೂಲಕ ರೈತ ಪ್ರತಿಭಟನೆಯನ್ನು ಹತ್ತಿಕಲು ಅಸಾಧ್ಯ: ಸಿಎಂ ಸಿದ್ದರಾಮಯ್ಯ
ನವದೆಹಲಿಯ ಜಂತರ್ ಮಂತರ್ ನಲ್ಲಿ ನಾಳೆ ನಡೆಯಲಿರುವ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಹುಬ್ಬಳ್ಳಿಯ ರೈತರನ್ನು ಭೋಪಾಲ್ ನಲ್ಲಿ ಬಂಧಿಸಿರುವ ಮಧ್ಯಪ್ರದೇಶ ಸರ್ಕಾರದ ಕ್ರಮ ಅತ್ಯಂತ ಖಂಡನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆದರಿಸಿ ರೈತರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಇಂತಹ ದಬ್ಬಾಳಿಕೆಯಿಂದ ಇನ್ನಷ್ಟು ರೈತರು ಬೀದಿಗಿಳಿಯಬಹುದೇ ಹೊರತು ಮಣ್ಣಿನ ಮಕ್ಕಳ ಹೋರಾಟ ನಿಲ್ಲುವುದಿಲ್ಲ. ಶಾಂತಿ-ಸುವ್ಯವಸ್ಥೆಯ‌ ಕಾಳಜಿಯನ್ನು ಕೇಂದ್ರ ಸರ್ಕಾರ ಹೊಂದಿದ್ದರೆ ತಕ್ಷಣ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ನಾಳಿನ ಪ್ರತಿಭಟನೆಯಲ್ಲಿ ಭಾಗವಹಿಸಲು ರೈಲಿನಲ್ಲಿ ರೈತರೊಂದಿಗೆ ಪ್ರಯಾಣಿಸುತ್ತಿದ್ದೆ ಆದರೆ ಪೋಲಿಸ್ ನಮ್ಮನ್ನು ಭೋಪಾಲ್ ನಿಲ್ದಾಣದಲ್ಲಿ ತಡೆದರು. ತಾವು ಹೇಗೋ ತಪ್ಪಿಸಿಕೊಂಡು ದೆಹಲಿಗೆ ತಲುಪಿರುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾದ ದಕ್ಷಿಣ ಭಾರತ ಸಂಚಾಲಕ ಕುರುಬೂರು ಶಾಂತಕುಮಾರ್ ಹೇಳಿದರು.

ಪೊಲೀಸ್ ಪೇದೆ ಮೇಲೆ ಹಲ್ಲೆ: ಜೆಡಿಎಸ್ ಶಾಸಕಿ ಪುತ್ರನ ವಿರುದ್ಧ ಎಫ್ಐಆರ್
ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ತಡೆದ ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಪುತ್ರ ಸಂತೋಷ ಹಾಗೂ ಇತರ ಏಳು ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವದುರ್ಗ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿರುವ ಕಾನ್‌ಸ್ಟೆಬಲ್ ಹನುಮಂತರಾಯ ಅವರು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅನ್ನು ತಡೆದು ವಾಹನ ಮತ್ತು ಅದರ ಚಾಲಕನನ್ನು ತನಿಖೆಗಾಗಿ ಠಾಣೆಗೆ ಕರೆದೊಯ್ದಿದ್ದಾಗ ಈ ಘಟನೆ ನಡೆದಿದೆ. ಅಕ್ರಮ ಮರಳುಗಾರಿಕೆ ವಿರುದ್ಧ ಶಾಸಕಿ ಕರೆಮ್ಮ ನಾಯಕ್ ತೊಡೆ ತಟ್ಟಿದ್ದರು. ಆದರೆ ಇದೀಗ ಅಕ್ರಮ ಮರಳುಗಾರಿಕೆಗೆ‌ ಪುತ್ರನ ಮೂಲಕ ಕುಮ್ಮಕ್ಕು ನೀಡುತ್ತಿರುವ ಆರೋಪ ಕೇಳಿಬಂದಿದೆ.

ವಿವಾಹಿತೆ ಮೇಲೆ ಅತ್ಯಾಚಾರ: ಆರು ಆರೋಪಿಗಳ ಬಂಧನ
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಆಕೆಯ ಪತಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 8ರಂದು ಗಂಗಾವತಿಯ ಬಸ್ ನಿಲ್ದಾಣ ಬಳಿಯ ಪಾರ್ಕ್ ನಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತೆ ಮತ್ತು ಆಕೆಯ ಪತಿ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಬಸ್ ನಿಲ್ದಾಣದಲ್ಲಿ ಜಗಳವಾಡುತ್ತಿದ್ದರು. ಜಗಳ ತೀವ್ರವಾಗುತ್ತಿದ್ದಂತೆ, ಆರು ಜನ ಮಧ್ಯಪ್ರವೇಶಿಸಿ ಸಂತ್ರಸ್ತೆಯ ಪತಿಗೆ ಥಳಿಸಿದ್ದಾರೆ. ನಂತರ ಆರೋಪಿಗಳ ಪೈಕಿ ಲಿಂಗರಾಜ ಎಂಬಾತ ಮಹಿಳೆಯನ್ನು ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಗಂಗಾವತಿ ಪೊಲೀಸ್ ಉಪಾಧೀಕ್ಷಕ ಸಿದ್ದಲಿಂಗಪ್ಪಗೌಡ ಪಾಟೀಲ್ ಹೇಳಿದ್ದಾರೆ.

ಶ್ರೀರಾಮನ ಬಗ್ಗೆ ಅವಹೇಳನ: ಶಿಕ್ಷಕಿ ಅಮಾನತು
ಶ್ರೀರಾಮನಿಗೆ ಅವಹೇಳನ ಮಾಡಿದ ಆರೋಪ ಸಂಬಂಧ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ. ಹಿಂದೂಗಳ ಅಸ್ಮಿತೆ ಶ್ರೀರಾಮನ ಅವಹೇಳನ ಖಂಡಿಸಿ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಇಂದು ಪೋಷಕರು ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಆಡಳಿತ ಮಂಡಳಿ ಸದಸ್ಯರು, ತನಿಖೆ ಪೂರ್ಣಗೊಳ್ಳುವವರೆಗೂ ಶಿಕ್ಷಕಿಯನ್ನು ಅಮಾನತು ಮಾಡಿದ್ದಾಗಿ ತಿಳಿಸಿದ್ದಾರೆ. ಆಡಳಿತ ಮಂಡಳಿಯ ಸದಸ್ಯರು ಅಧಿಕೃತವಾಗಿ ಲಿಖಿತವಾಗಿ ಶಾಲೆಯ ಲೆಟರ್ ಹೆಡ್​ನಲ್ಲಿ ಶಿಕ್ಷಕಿಯನ್ನು ಅಮಾನತ್ತು ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಿದರು. ಮುಂದೆ ಶಿಕ್ಷಣ ಇಲಾಖೆ ಪ್ರಕರಣದ ಆಂತರಿಕ ತನಿಖೆ ನಡೆಸಲಿದೆ. ಶಿಕ್ಷಣ ಇಲಾಖೆ ತನಿಖಾ ವರದಿ ಆಧಾರದ ಮೇಲೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com